
ನವದೆಹಲಿ: ಅಕ್ಟೋಬರ್ ತಿಂಗಳಲ್ಲಿ ಷೇರುಗಳ ಖರೀದಿಗೆ ಆದ್ಯತೆ ನೀಡಿದ್ದ ವಿದೇಶಿ ಹೂಡಿಕೆದಾರರು (ಎಫ್‌ಪಿಐ) ನವೆಂಬರ್‌ನಲ್ಲಿ ದೇಶದ ಷೇರುಪೇಟೆಯಿಂದ ಹಣ ಹಿಂಪಡೆಯುವ ಕಾರ್ಯವನ್ನು ಮತ್ತೆ ಆರಂಭಿಸಿದ್ದಾರೆ. ಎಫ್‌ಪಿಐಗಳು ನವೆಂಬರ್‌ನಲ್ಲಿ ಇದುವರೆಗೆ ಒಟ್ಟು ₹12,569 ಕೋಟಿ ಬಂಡವಾಳವನ್ನು ಹಿಂಪಡೆದಿದ್ದಾರೆ.
ಎಫ್‌ಪಿಐಗಳು ಅಕ್ಟೋಬರ್‌ನಲ್ಲಿ ಒಟ್ಟು ₹14,610 ಕೋಟಿ ಹೂಡಿಕೆ ಮಾಡಿದ್ದರು. ವಿದೇಶಿ ಹೂಡಿಕೆದಾರರು (ಎಫ್‌ಪಿಐ) ಸೆಪ್ಟೆಂಬರ್‌ನಲ್ಲಿ ₹23,885 ಕೋಟಿ, ಆಗಸ್ಟ್‌ನಲ್ಲಿ ₹34,990 ಕೋಟಿ ಹಾಗೂ ಜುಲೈನಲ್ಲಿ ₹17,700 ಕೋಟಿ ಹೂಡಿಕೆಯನ್ನು ಹಿಂಪಡೆದಿದ್ದರು.
ನವೆಂಬರ್‌ನಲ್ಲಿ ಅವರು ಮತ್ತೆ ಷೇರು ಮಾರಾಟಕ್ಕೆ ಆದ್ಯತೆ ನೀಡಿದ್ದಾರೆ. ನವೆಂಬರ್ ತಿಂಗಳ ಪ್ರತಿ ವಹಿವಾಟಿನ ದಿನವೂ ಅವರು ಷೇರುಗಳ ಮಾರಾಟಕ್ಕೆ ಗಮನ ನೀಡುತ್ತಿದ್ದಾರೆ. ಕೆಲವು ಹೂಡಿಕೆದಾರರು ಭಾರತದ ಮಾರುಕಟ್ಟೆಗಳಿಂದ ಹಣವನ್ನು ಹಿಂಪಡೆದು, ಕೃತಕ ಬುದ್ಧಿಮತ್ತೆ ಆಧಾರಿತ ಕಂಪನಿಗಳ ಷೇರುಗಳು ಹೆಚ್ಚಿನ ಮೌಲ್ಯವರ್ಧನೆ ಕಾಣುತ್ತಿರುವ ಮಾರುಕಟ್ಟೆಗಳಲ್ಲಿ ಹಣ ತೊಡಗಿಸುತ್ತಿದ್ದಾರೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್ ಕಂಪನಿಯ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.
‘ಎ.ಐ ವಿಚಾರದಲ್ಲಿ ಭಾರತವು ಈಗ ಹೆಚ್ಚೇನೂ ಸಾಧನೆ ತೋರಿಲ್ಲ ಎಂಬಂತೆ ಕಾಣಲಾಗುತ್ತಿದೆ. ಅದು ಎಫ್‌ಪಿಐ ಚಟುವಟಿಕೆಯ ಮೇಲೆ ಪ್ರಭಾವ ಬೀರುತ್ತಿದೆ’ ಎಂದು ಅವರು ವಿವರಿಸಿದ್ದಾರೆ. ಆದರೆ ಎ.ಐ. ಸಂಬಂಧಿತ ಷೇರುಗಳ ಮೌಲ್ಯವು ಈಗ ಬಹಳ ಹೆಚ್ಚಾಗಿದೆ ಎಂದು ಕೂಡ ಅವರು ಹೇಳಿದ್ದಾರೆ.
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಕಂಪನಿಗಳ ಹಣಕಾಸು ಫಲಿತಾಂಶವು ನಿರೀಕ್ಷೆಗಿಂತ ತುಸು ಚೆನ್ನಾಗಿ ಇದೆ. ಅದರಲ್ಲೂ ಮುಖ್ಯವಾಗಿ, ಮಿಡ್‌ಕ್ಯಾಪ್ ವಲಯದ ಕಂಪನಿಗಳ ಫಲಿತಾಂಶವು ಚೆನ್ನಾಗಿ ಆಗಿದೆ. ಆದರೆ ಜಾಗತಿಕ ಮಟ್ಟದಲ್ಲಿನ ಕೆಲವು ಸವಾಲುಗಳು ವಿದೇಶಿ ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆ ಇರಿಸುವಂತೆ ಮಾಡಬಹುದು ಎಂದು ಏಂಜೆಲ್ ಒನ್ ಕಂಪನಿಯ ಹಿರಿಯ ವಿಶ್ಲೇಷಕ ವಕಾರ್ ಜಾವೆದ್ ಖಾನ್ ಹೇಳಿದ್ದಾರೆ.
2025ರ ಇದುವರೆಗೆ ಎಫ್‌ಪಿಐಗಳು ಒಟ್ಟು ₹1.5 ಲಕ್ಷ ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಭಾರತದ ಷೇರುಪೇಟೆಯಿಂದ ಹಿಂಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.