ADVERTISEMENT

ಎರಡು ತಿಂಗಳಿಂದ ಇಳಿಕೆ ಹಾದಿಯಲ್ಲಿ ಪೆಟ್ರೋಲ್‌, ಡೀಸೆಲ್‌

ಏಜೆನ್ಸೀಸ್
Published 8 ಡಿಸೆಂಬರ್ 2018, 10:21 IST
Last Updated 8 ಡಿಸೆಂಬರ್ 2018, 10:21 IST
   

ನವದೆಹಲಿ: ದೇಶದಲ್ಲಿ ಇಂಧನ ದರಗಳು ಇಳಿಕೆಯ ಪಥದಲ್ಲಿ ಸಾಗುತ್ತಿದೆ. ಏರಿಕೆಯ ಬಿಸಿಯಿಂದ ಕಂಗೆಟ್ಟಿದ್ದ ಜನರು ಎರಡು ತಿಂಗಳಿನಿಂದ ಕೊಂಚ ನಿರಾಳರಾಗಿದ್ದಾರೆ.ದೇಶದಾದ್ಯಂತ ಶನಿವಾರ ತೈಲ ಬೆಲೆ 20–35 ಪೈಸೆ ಕಡಿಮೆಯಾಗಿದೆ.

ಇಂಧನ ದರಗಳು ಆಗಸ್ಟ್‌ನಿಂದ ಅಕ್ಟೋಬರ್‌ವರೆಗೂ ಏರುಮುಖವಾಗಿಸಾಗುತ್ತಿತ್ತು.. ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಕ್ಟೋಬರ್‌ ಆರಂಭದಲ್ಲಿ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಜೊತೆಗೆ ತೈಲ ಕಂಪನಿಗಳು ಸಬ್ಸಿಡಿ ಘೋಷಿಸಿತ್ತು. ಅದಾದ ನಂತರ ಇಂಧನ ದರಗಳು ಇಳಿಮುಖವಾಗಿ ಸಾಗುತ್ತಿವೆ.

ರಾಷ್ಟ್ರದ ರಾಜಧಾನಿಯಲ್ಲಿ ಅಕ್ಟೋಬರ್‌ 4ರಂದು ಲೀಟರ್‌ ಪೆಟ್ರೋಲ್‌ಗೆ ಅತಿ ಹೆಚ್ಚು ₹84.00 ಇದ್ದ ದರಕ್ಕೆ ಹೋಲಿಸಿದರೆ ಶನಿವಾರದ ಅಂತ್ಯಕ್ಕೆ ₹ 70.70 ಆಗಿದೆ. ಎರಡು ತಿಂಗಳಲ್ಲಿ ಒಟ್ಟು ₹13 ಇಳಿಕೆಯಾಗಿದೆ.ಇನ್ನು ಡೀಸೆಲ್‌ ದರ ₹ 65.30ರಷ್ಟು ಆಗಿದೆ.

ADVERTISEMENT

ಮುಂಬೈನಲ್ಲಿ ₹90ರ ಗಡಿ ದಾಟಿದ್ದ ಪ್ರತಿ ಲೀಟರ್‌ ಪೆಟ್ರೋಲ್‌ ದರ ಶನಿವಾರದಂದು ₹76.28 ಆಗಿದೆ. ಎರಡು ತಿಂಗಳಲ್ಲಿ ಬರೋಬ್ಬರಿ ₹15.08 ದರ ಇಳಿಕೆಯಾಗಿದೆ. ಶುಕ್ರವಾರದ ಅಂತ್ಯಕ್ಕೆ ₹68.59 ಇದ್ದ ಡೀಸೆಲ್‌ ಬೆಲೆ ಶನಿವಾರಕ್ಕೆ 20 ಪೈಸೆ ಕಡಿತಗೊಂಡಿದೆ. ಕೋಲ್ಕತ್ತದಲ್ಲಿ ಶನಿವಾರ ಪ್ರತಿ ಲೀಟರ್‌ ಪೆಟ್ರೋಲ್‌ ₹72.75 ಹಾಗೂ ಡೀಸೆಲ್‌ ₹ 67.03 ದರಕ್ಕೆ ಮಾರಾಟವಾಗುತ್ತಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಇಳಿಕೆ ಕಂಡುಬರುತ್ತಿರುವುದರಿಂದ ಇಂಧನ ದರಗಳು ಕಡಿಮೆಯಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.