ADVERTISEMENT

ಬೆಳ್ಳುಳ್ಳಿ ದರ ಗಗನಮುಖಿ: ಡಿಸೆಂಬರ್‌ವರೆಗೂ ದರ ಇಳಿಕೆ ಅನುಮಾನ

ಬಸವರಾಜ ಸಂಪಳ್ಳಿ
Published 10 ಅಕ್ಟೋಬರ್ 2019, 19:46 IST
Last Updated 10 ಅಕ್ಟೋಬರ್ 2019, 19:46 IST
ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಧ್ಯಪ್ರದೇಶದಿಂದ ಬಂದಿರುವ ಹೈಬ್ರಿಡ್‌ ಬೆಳ್ಳುಳ್ಳಿ
ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಧ್ಯಪ್ರದೇಶದಿಂದ ಬಂದಿರುವ ಹೈಬ್ರಿಡ್‌ ಬೆಳ್ಳುಳ್ಳಿ   

ಹುಬ್ಬಳ್ಳಿ: ರಾಜ್ಯದಲ್ಲಿ ಬೆಳ್ಳುಳ್ಳಿ ದರ ದಿನದಿಂದ ದಿನಕ್ಕೆ ಗಗನಮುಖಿಯಾಗತೊಡಗಿದ್ದು, ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹ 12 ಸಾವಿರದಿಂದ ಗರಿಷ್ಠ ₹15 ಸಾವಿರಕ್ಕೆ ಏರಿಕೆಯಾಗಿದೆ.

ಕಳೆದ ವರ್ಷ ಇದೇ ಸಮಯದಲ್ಲಿ ಕ್ವಿಂಟಲ್‌ಗೆ ಕನಿಷ್ಠ ₹ 2 ಸಾವಿರದಿಂದ ಗರಿಷ್ಠ ₹2,500 ವರಗೆ ದರ ಇತ್ತು.

‘ರಾಣೆಬೆನ್ನೂರು, ಕುಂದಗೋಳ, ಶಿರಹಟ್ಟಿ, ರಾಮದುರ್ಗ, ಸವದತ್ತಿ, ಲಕ್ಷ್ಮೇಶ್ವರ ವ್ಯಾಪ್ತಿಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಜವಾರಿ ಬೆಳ್ಳುಳ್ಳಿ ಬೆಳೆಯುತ್ತಾರೆ. ಆದರೆ, ಈ ವರ್ಷ ಆಗಸ್ಟ್‌ನಲ್ಲಿ ಭಾರಿ ಮಳೆ ಸುರಿದ ಪರಿಣಾಮ ಬೆಳೆ ಹಾಳಾಗಿದ್ದು, ಇಳುವರಿ ಪ್ರಮಾಣ ಕುಂಠಿತವಾಗಿದೆ’ ಎಂದು ಹುಬ್ಬಳ್ಳಿ ಎಪಿಎಂಸಿ ವ್ಯಾಪಾರಸ್ಥ ಮಲ್ಲಿಕ್‌ಜಾನ್‌ ಬಿಜಾಪುರಿ ‘ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

‘ಸ್ಥಳೀಯ ಜವಾರಿ ಬೆಳ್ಳುಳ್ಳಿ ಕೊರತೆ ಇರುವುದರಿಂದ ಇಲ್ಲಿಯ ಮಾರುಕಟ್ಟೆಗೆ ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್‌, ಛತ್ತೀಸಗಡದಿಂದ ಹೈಬ್ರಿಡ್‌ ಬೆಳ್ಳುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ.

‘ಕಳೆದ ಮೂರ್ನಾಲ್ಕು ತಿಂಗಳಿಂದ ಒಂದೇ ಸಮ ದರ ಏರಿಕೆಯಾಗತೊಡಗಿದೆ. ಡಿಸೆಂಬರ್‌ವರೆಗೂ ದರ ಇಳಿಕೆಯಾಗುವ ಸಾಧ್ಯತೆ ಇಲ್ಲ. ಬಳಿಕ ಮಾರುಕಟ್ಟೆಗೆ ಹೊಸ ಬೆಳೆ ಬರಲಿದ್ದು, ಬೆಲೆ ಇಳಿಯುವ ಸಾಧ್ಯತೆ ಇದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

’ಅಧಿಕ ಮಳೆಯಿಂದ ಈ ವರ್ಷ ಶೇ 75ರಷ್ಟು ಬೆಳ್ಳುಳ್ಳಿ ಬೆಳೆ ಹಾನಿಗೊಳಗಾಗಿದೆ. ಶೇ 25ರಷ್ಟು ಮಾತ್ರ ಬೆಳೆ ರೈತರ ಕೈಸೇರಿದೆ. ಗುರುವಾರ ಮಾರುಕಟ್ಟೆಗೆ ಕೇವಲ 300 ಚೀಲ ಬೆಳ್ಳುಳ್ಳಿ ಆವಕವಾಗಿದೆ. ಹೋದ ವರ್ಷ ಈ ದಿನ ಭಾರಿ ಪ್ರಮಾಣದ ಬೆಳೆ ಬಂದಿತ್ತು’ ಎಂದು ರಾಣೆಬೆನ್ನೂರು ಎಪಿಎಂಸಿ ವ್ಯಾಪಾರಸ್ಥ ಶಿವಣ್ಣ ಬನ್ನಿಹಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.