ADVERTISEMENT

ಇಳಿಯದ ಬೆಳ್ಳುಳ್ಳಿ ದರ: ಗ್ರಾಹಕರು ತತ್ತರ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 15:24 IST
Last Updated 13 ಫೆಬ್ರುವರಿ 2024, 15:24 IST
ಬೆಳ್ಳುಳ್ಳಿ
ಬೆಳ್ಳುಳ್ಳಿ   

ಬೆಂಗಳೂರು: ಕಳೆದ ಎರಡು ದಿನಗಳಿಂದ ಸಗಟು ಬೆಳ್ಳುಳ್ಳಿ ದರವು ಕೆ.ಜಿಗೆ ₹30ರಿಂದ ₹40 ಇಳಿಕೆಯಾಗಿದ್ದರೂ, ಚಿಲ್ಲರೆ ಮಾರುಕಟ್ಟೆಯಲ್ಲಿ ಧಾರಣೆ ಇಳಿಕೆಯಾಗಿಲ್ಲ. ಇದರಿಂದ ಗ್ರಾಹಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. 

ಬೆಂಗಳೂರಿನ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮಧ್ಯಪ್ರದೇಶದಿಂದ ಅತಿಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಪೂರೈಕೆಯಾಗುತ್ತದೆ. ಪ್ರತಿದಿನ 3 ಸಾವಿರದಿಂದ 4 ಸಾವಿರ ಚೀಲ (ಪ್ರತಿ ಚೀಲ 50 ಕೆ.ಜಿ) ಆವಕವಾಗುತ್ತಿದೆ.

ಎರಡು ದಿನಗಳ ಹಿಂದೆ ‘ಎ’ ದರ್ಜೆಯ ಹೈಬ್ರೀಡ್‌ ಬೆಳ್ಳುಳ್ಳಿಯ ಸಗಟು ಧಾರಣೆಯು ಪ್ರತಿ ಕೆ.ಜಿಗೆ ₹330ರಿಂದ ₹340 ಇತ್ತು. ಸದ್ಯ ₹300ಕ್ಕೆ ಇಳಿಕೆಯಾಗಿದೆ.

ADVERTISEMENT

ಮಧ್ಯಪ್ರದೇಶದಲ್ಲಿ ಬೆಳ್ಳುಳ್ಳಿ ಕೊಯ್ಲು ಆರಂಭವಾಗಿದೆ. ಹಾಗಾಗಿ, ಆವಕ ಹೆಚ್ಚಾಗುತ್ತಿರುವುದರಿಂದ ಸಗಟು ದರದಲ್ಲಿ ಇಳಿಕೆಯಾಗಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಜವಾರಿ ಬೆಳ್ಳುಳ್ಳಿ ಪ್ರತಿ ಕೆ.ಜಿಗೆ ₹450 ದಾಟಿದೆ. ಹೈಬ್ರೀಡ್‌ ಬೆಳ್ಳುಳ್ಳಿ ಕೆ.ಜಿಗೆ ₹400ರಿಂದ ₹430 ಇದೆ.

ರಾಜ್ಯದಲ್ಲಿ ಡಿಸೆಂಬರ್‌ ಎರಡನೇ ವಾರದಲ್ಲಿ ಬೆಳ್ಳುಳ್ಳಿ ದರವು ಏರಿಕೆಯ ಹಾದಿ ಹಿಡಿದಿತ್ತು. ಅಂದಿನಿಂದ ಇಲ್ಲಿಯವರೆಗೂ ಬೆಲೆ ಇಳಿಕೆಯಾಗಿಲ್ಲ.   

ಯಶವಂತಪುರದ ಮಾರುಕಟ್ಟೆಯಿಂದ ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬೆಳ್ಳುಳ್ಳಿ ಪೂರೈಕೆಯಾಗುತ್ತದೆ. 

‘ಬೆಂಗಳೂರು ನಗರ ಸೇರಿದಂತೆ ಇತರೇ ಜಿಲ್ಲೆಗಳಿಗೆ ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌ನಿಂದ ಬೆಳ್ಳುಳ್ಳಿ ಪೂರೈಕೆಯಾಗುತ್ತದೆ. ಇನ್ನೆರಡು ವಾರದೊಳಗೆ ಆವಕ ಹೆಚ್ಚಾಗಲಿದ್ದು, ಸಗಟು ದರವು ಕೆ.ಜಿಗೆ ₹200ಕ್ಕೆ ಇಳಿಕೆಯಾಗಲಿದೆ. ಆಗಷ್ಟೇ ಚಿಲ್ಲರೆ ಮಾರುಕಟ್ಟೆಯಲ್ಲಿಯೂ ಧಾರಣೆ ಕಡಿಮೆಯಾಗಲಿದೆ’ ಎಂದು ಬೆಂಗಳೂರಿನ ಬೆಳ್ಳುಳ್ಳಿ ಸಗಟು ವ್ಯಾಪಾರಿಯಾದ ಗುಜರಾತ್‌ ಟ್ರೇಡರ್ಸ್‌ನ ಜುಬೇರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮಂಗಳೂರು: ತಗ್ಗಿದ ಆವಕ

ಇಲ್ಲಿನ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಆವಕ ಕಡಿಮೆಯಾಗಿದೆ. ‘ಒಂದು ತಿಂಗಳಿನಿಂದಲೂ ದರದಲ್ಲಿ ಏರಿಳಿತವಾಗುತ್ತಿದೆ. ಈಗ ಹೊಸ ಸರಕು ಮಾರುಕಟ್ಟೆಗೆ ಬರುತ್ತಿದೆ. ಆದರೆ ಬೇಡಿಕೆ ಇರುವಷ್ಟು ಪೂರೈಕೆ ಆಗುತ್ತಿಲ್ಲ. ಗ್ರಾಹಕರು ಕೂಡ ದರ ಹೆಚ್ಚಳದಿಂದಾಗಿ ಖರೀದಿ ಕಡಿಮೆ ಮಾಡಿದ್ದಾರೆ. ಒಂದು ಕೆ.ಜಿ ಖರೀದಿಸುವವರು ಕಾಲು ಕೆ.ಜಿ ಕೊಂಡೊಯ್ಯುತ್ತಾರೆ’ ಎನ್ನುತ್ತಾರೆ ಹಂಪನಕಟ್ಟೆಯ ಕಿರಾಣಿ ವ್ಯಾಪಾರಿ ಗೋಪಾಲ ಪೈ. ‘ಮಾರುಕಟ್ಟೆಗೆ ಹಸಿ ಬೆಳ್ಳುಳ್ಳಿ ಹೆಚ್ಚು ಆವಕವಾಗುತ್ತಿದೆ. ಇದನ್ನು ದಾಸ್ತಾನು ಮಾಡಿದರೆ ದಿನದಿಂದ ದಿನಕ್ಕೆ ತೂಕ ತಗ್ಗುತ್ತದೆ. ಇದರಿಂದ ಚಿಲ್ಲರೆ ವ್ಯಾಪಾರಸ್ಥರಿಗೆ ನಷ್ಟವಾಗುತ್ತದೆ’ ಎಂದರು.

ಹೊಸಪೇಟೆಯಲ್ಲಿ ದರ ಕಡಿಮೆ

ಹುಬ್ಬಳ್ಳಿ: ಹುಬ್ಬಳ್ಳಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ವಿಜಯಪುರ ಗದಗ ಸೇರಿದಂತೆ ವಿವಿಧೆಡೆಯಿಂದ  ಬೆಳ್ಳುಳ್ಳಿ ಆವಕವಾಗುತ್ತಿದೆ. ಆದರೆ ಸಗಟು ದರ ಮಾತ್ರ ಏರುಗತಿಯಲ್ಲೇ ಇದೆ. ಹೈಬ್ರೀಡ್‌ ಚಿಕ್ಕ ಬೆಳ್ಳುಳ್ಳಿಯ ಸಗಟು ದರ ಪ್ರತಿ ಕ್ವಿಂಟಲ್‌ಗೆ ₹18 ಸಾವಿರದಿಂದ ₹25 ಸಾವಿರ ಇದೆ. ಹೈಬ್ರೀಡ್‌ ದೊಡ್ಡ ಗಾತ್ರದ ಬೆಳ್ಳುಳ್ಳಿ ಕ್ವಿಂಟಲ್‌ಗೆ ₹25 ಸಾವಿರದಿಂದ ₹30 ಸಾವಿರ ಇದೆ. ವಿಜಯಪುರ ಮತ್ತು ಗದಗ ಜಿಲ್ಲೆಯಿಂದ ಪೂರೈಕೆಯಾಗುವ ಜವಾರಿ ಹೊಸ ಬೆಳ್ಳುಳ್ಳಿ ದರವು ಪ್ರತಿ ಕ್ವಿಂಟಲ್‌ಗೆ ₹28 ಸಾವಿರದಿಂದ ₹30 ಸಾವಿರ ಇದೆ. ಹೊಸಪೇಟೆಯಲ್ಲಿ ಇಳಿಕೆ: ಹೊಸಪೇಟೆ ಎಪಿಎಂಸಿಗೆ ಆಂಧ್ರಪ್ರದೇಶ ತೆಲಂಗಾಣ ಭಾಗದಿಂದ ಬೆಳ್ಳುಳ್ಳಿ ಪೂರೈಕೆ ಆಗುತ್ತದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಧಾರಣೆ ಸ್ವಲ್ಪ ಕಡಿಮೆ ಇದೆ. ಕಳೆದ ತಿಂಗಳು ಸಗಟು ಬೆಳ್ಳುಳ್ಳಿ ಧಾರಣೆ ಕೆ.ಜಿಗೆ ₹180 ಇತ್ತು. ಸದ್ಯ ₹220ಕ್ಕೆ ಏರಿಕೆಯಾಗಿದೆ. ಚಿಲ್ಲರೆ ದರ ಕೆ.ಜಿಗೆ ₹210ರಿಂದ ₹230 ಇತ್ತು. ಈಗ ₹280ರಿಂದ ₹300ಕ್ಕೆ ಏರಿದೆ. ‘ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಿಸುವ ಸಾಧ್ಯತೆಯಿದೆ. ಈ ಭಾಗದಲ್ಲೂ ಚಿಲ್ಲರೆ ಧಾರಣೆಯು ಕೆ.ಜಿ ₹350 ಹೆಚ್ಚಳವಾಗುವ ಸಾಧ್ಯತೆಯಿದೆ’ ಎಂದು ಹೊಸಪೇಟೆಯ ಸಗಟು ವ್ಯಾಪಾರಿ ಬಿ. ಸತೀಶ್‌ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.