
ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 7.2ರಷ್ಟಾಗುವ ನಿರೀಕ್ಷೆ ಇದೆ ಎಂದು ವಿಶ್ವಬ್ಯಾಂಕ್ ತನ್ನ ಅಂದಾಜನ್ನು ಪರಿಷ್ಕರಿಸಿದೆ.
ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವುದು, ತೆರಿಗೆ ಸುಧಾರಣೆಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿನ ಕುಟುಂಬಗಳ ಗಳಿಕೆಯಲ್ಲಿ ಹೆಚ್ಚಳವಾಗಿರುವುದು ಜಿಡಿಪಿ ಹೆಚ್ಚಳಕ್ಕೆ ನೆರವಾಗಲಿದೆ ಎಂದು ಹೇಳಿದೆ. ಭಾರತವು ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಆಗಲಿದೆ ಎಂದು ಹೇಳಿದೆ.
ಜೂನ್‌ನಲ್ಲಿ ವಿಶ್ವಬ್ಯಾಂಕ್ ಭಾರತದ ಜಿಡಿಪಿ ಬೆಳವಣಿಗೆ ಶೇ 6.3ರಷ್ಟಾಗಲಿದೆ ಎಂದು ಹೇಳಿತ್ತು.
2026–27ರಲ್ಲಿ ದೇಶದ ಜಿಡಿಪಿ ಶೇ 6.5 ಮತ್ತು 2027–28ರಲ್ಲಿ ಶೇ 6.6ರಷ್ಟಾಗಬಹುದು ಎಂದು ಹೇಳಿದೆ.
ಅಮೆರಿಕದ ಸುಂಕ ಹೆಚ್ಚಳ ಮತ್ತು ವ್ಯಾಪಾರ ಸಂಬಂಧಿತ ಅನಿಶ್ಚಿತತೆಯಿಂದಾಗಿ ಬಂಡವಾಳದ ಹೊರಹರಿವು ಹೆಚ್ಚಾಗಿದೆ. ಇದರಿಂದ ಮೇ ತಿಂಗಳಿನಿಂದ ಭಾರತದ ಕರೆನ್ಸಿ ಮೌಲ್ಯ ಕುಸಿದಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮೊದಲ ಅಂದಾಜಿನ ಪ್ರಕಾರ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ 7.4ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.