ADVERTISEMENT

ಡಿಜಿಸಿಎ ಪರಿಶೀಲನೆಗೆ 'ಗೋ ಫಸ್ಟ್‌' ಪುನಶ್ಚೇತನ ಯೋಜನೆ

ಪಿಟಿಐ
Published 29 ಜೂನ್ 2023, 14:27 IST
Last Updated 29 ಜೂನ್ 2023, 14:27 IST
ಗೋ ಫಸ್ಟ್‌
ಗೋ ಫಸ್ಟ್‌   

ಮುಂಬೈ: ಆರ್ಥಿಕವಾಗಿ ನಷ್ಟದಲ್ಲಿರುವ ಗೋ ಫಸ್ಟ್‌ ವಿಮಾನಯಾನ ಕಂಪನಿಯ ಪುನಶ್ಚೇತನ ಯೋಜನೆಯನ್ನು ನಾಗರಿಕ ವಿಮಾನಯನ ಮಹಾನಿರ್ದೇಶನಾಲಯ (ಡಿಜಿಸಿಎ) ಪರಿಶೀಲನೆ ನಡೆಸಲಿದೆ ಎಂದು ಮೂಲಗಳು ಹೇಳಿವೆ.

ವಿಮಾನಯಾನ ಕಾರ್ಯಾಚರಣೆಗೆ ಕಂಪನಿಯು ಯಾವೆಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎನ್ನುವುದನ್ನು ಸಹ ಡಿಜಿಸಿಎ ಪರಿಶೀಲಿಸಲಿದೆ ಎಂದೂ ಮೂಲಗಳು ತಿಳಿಸಿವೆ.

ಕಂಪನಿಯ ಹಾಲಿ ಆಡಳಿತ ಮಂಡಳಿಯ ಹಿರಿಯ ಅಧಿಕಾರಿಗಳು ಡಿಜಿಸಿಎನ ಅಧಿಕಾರಿಗಳೊಂದಿಗೆ ಪುನಶ್ಚೇತನ ಯೋಜನೆಯ ವಿವಿಧ ಆಯಾಮಗಳ ಕುರಿತು ಬುಧವಾರ ಚರ್ಚೆ ನಡೆಸಿದ್ದಾರೆ.

ADVERTISEMENT

ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಮೂಲಗಳ ಪ್ರಕಾರ, ಕಂಪನಿಯಲ್ಲಿನ ಬಿಕ್ಕಟ್ಟನ್ನು ಪರಿಹರಿಸಲು ನೇಮಕ ಆಗಿರುವ ವೃತ್ತಿಪರ ಅಧಿಕಾರಿ ಶೈಲೇಂದ್ರ ಅಜ್ಮೇರ್‌ ಮತ್ತು ಮಧ್ಯಂತರ ಸಿಇಒ ಕೌಶಿಕ್‌ ಖೋನಾ ಅವರು ಡಿಜಿಸಿಎ ಅಧಿಕಾರಿಗಳಿಗೆ ಪುನಶ್ಚೇತನ ಯೋಜನೆ ಕುರಿತು ವಿವರವಾದ ಮಾಹಿತಿ ನೀಡಿದ್ದಾರೆ.

ವಾಡಿಯಾ ಕುಟುಂಬದ ಒಡೆತನದಲ್ಲಿ ಇರುವ ಗೋ ಫಸ್ಟ್‌ ಮೇ 3ರಿಂದ ವಿಮಾನ ಸೇವೆಯನ್ನು ನಿಲ್ಲಿಸಿದ್ದು, ಸ್ವಯಂ ಪ್ರೇರಿತವಾಗಿ ದಿವಾಳಿ ಪ್ರಕ್ರಿಯೆಗೆ ಒಳಗಾಗಿದೆ.

ಡಿಜಿಸಿಎ ಮುಂದಿನ ವಾರ ಪರಿಶೀಲನೆ ನಡೆಸುವ ನಿರೀಕ್ಷೆ ಇದೆ. ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಿದಾಗ ತಾತ್ಕಾಲಿಕವಾಗಿ ಜೈಪುರ, ಲಖನೌ, ಕಣ್ಣೂರು, ಪಟ್ನಾ, ವಾರಾಣಸಿ ಮತ್ತು ರಾಂಚಿ ಮಾರ್ಗಗಳಲ್ಲಿ ವಿಮಾನ ಸೇವೆ ಲಭ್ಯವಾಗುವುದು ಅನುಮಾನ ಎಂದು ಇನ್ನೊಂದು ಮೂಲ ತಿಳಿಸಿದೆ.

ಕಾರ್ಯಾಚರಣೆ ಪುನರಾರಂಭಿಸಲು ದಿನಕ್ಕೆ ₹10 ಕೋಟಿ ವೆಚ್ಚ ಆಗುವ ಅಂದಾಜು ಮಾಡಲಾಗಿದೆ. ಹೀಗಾಗಿ ₹450 ಕೋಟಿ ಮಧ್ಯಂತರ ನೆರವು ನೀಡಲು ಬ್ಯಾಂಕ್‌ಗಳು ಒಪ್ಪಿಗೆ ನೀಡಿವೆ ಎಂದು ಬ್ಯಾಂಕಿಂಗ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.