ನವದೆಹಲಿ: ಗುರುವಾರ ಚಿನಿವಾರಪೇಟೆಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹600 ಏರಿಕೆಯಾಗಿ ₹1,00,620ಕ್ಕೆ ತಲುಪಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ತಿಳಿಸಿದೆ.
ಶೇ 99.9ರಷ್ಟು ಶುದ್ಧ ಚಿನ್ನವು ಬುಧವಾರ 10 ಗ್ರಾಂಗೆ ₹1,00,020ಕ್ಕೆ ತಲುಪಿತ್ತು. ಇಂದು ₹600 ಏರಿಕೆಯಾಗಿದೆ. ಆಭರಣ ಚಿನ್ನದ ಬೆಲೆಯು (ಶೇ 99.5 ಪರಿಶುದ್ಧತೆ) ₹500 ಏರಿಕೆಯಾಗಿ, ₹1,00,200 ಆಗಿದೆ.
‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಡರಲ್ ರಿಸರ್ವ್ ಗವರ್ನರ್ ರಾಜೀನಾಮೆಗೆ ಕರೆ ನೀಡಿದ್ದರಿಂದ ಚಿನ್ನದ ಮೇಲೆ ಹೂಡಿಕೆಗೆ ಬೇಡಿಕೆ ಹೆಚ್ಚಾಯಿತು. ಇದು ಕೇಂದ್ರ ಬ್ಯಾಂಕಿನ ಸ್ವಾತಂತ್ರ್ಯದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ’ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸರಕುಗಳ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ.
ಡಾಲರ್ ಮೌಲ್ಯವು ಇಳಿಕೆಯಾಗುತ್ತಿದೆ. ಇದು ಸಹ ಚಿನ್ನದ ದರ ಏರಿಕೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಇದಲ್ಲದೆ, ಗುರುವಾರ ಬೆಳ್ಳಿ ಬೆಲೆ ಪ್ರತಿ ಕೆ.ಜಿಗೆ ₹1,500ಗಳಷ್ಟು ಏರಿಕೆಯಾಗಿ ₹1,14,000ಕ್ಕೆ ತಲುಪಿದೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ) ಬುಧವಾರ ಬೆಳ್ಳಿ ಬೆಲೆ ಕೆ.ಜಿಗೆ ₹1,12,500 ಗಳಷ್ಟಿತ್ತು ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಸೂಚ್ಯಂಕ ಏರಿಕೆ: ಐಸಿಐಸಿಐ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರುಗಳ ಖರೀದಿ ಹೆಚ್ಚಳದಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಏರಿಕೆ ಕಂಡಿವೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 142 ಅಂಶ ಏರಿಕೆಯಾಗಿ, 82 ಸಾವಿರಕ್ಕೆ ವಹಿವಾಟು ಕೊನೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 33 ಅಂಶ ಹೆಚ್ಚಳವಾಗಿ, 25,083ಕ್ಕೆ ಅಂತ್ಯಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.