ADVERTISEMENT

ಸೋಮವಾರದಿಂದ ಚಿನ್ನದ ಬಾಂಡ್ 5ನೇ ಕಂತು; ನೀಡಿಕೆ ಬೆಲೆ ಪ್ರತಿ ಗ್ರಾಂಗೆ ₹ 4,790

ಪಿಟಿಐ
Published 7 ಆಗಸ್ಟ್ 2021, 12:47 IST
Last Updated 7 ಆಗಸ್ಟ್ 2021, 12:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಚಿನ್ನದ ಬಾಂಡ್ ಯೋಜನೆಯ ಪ್ರಸಕ್ತ ಹಣಕಾಸು ವರ್ಷದ ಐದನೇ ಕಂತು ಸೋಮವಾರದಿಂದ ಆರಂಭವಾಗಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೀಡಿಕೆ ಬೆಲೆಯನ್ನು ಪ್ರತಿ ಗ್ರಾಂಗೆ ₹ 4,790 ನಿಗದಿಪಡಿಸಿದೆ.

ಸೋಮವಾರ ಬಾಂಡ್ ಖರೀದಿ ಆರಂಭವಾಗಲಿದ್ದು ಶುಕ್ರವಾರ ಮುಕ್ತಾಯವಾಗಲಿದೆ. ಇದೇ 17ರಂದು ಬಾಂಡ್ ವಿತರಣೆ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಆನ್ ಲೈನ್ ಮೂಲಕ ಬಾಂಡ್ ಖರೀದಿಗೆ ಅರ್ಜಿ ಸಲ್ಲಿಸುವವರಿಗೆ ₹ 50 ವಿನಾಯಿತಿ ಸಿಗಲಿದೆ. ಹೀಗಾಗಿ ಇವರಿಗೆ ಬಾಂಡ್ ಬೆಲೆಯು ಪ್ರತಿ ಗ್ರಾಂಗೆ ₹ 4,740 ಇರಲಿದೆ. ನಾಲ್ಕನೇ ಕಂತಿನಲ್ಲಿ ಪ್ರತಿ ಗ್ರಾಂಗೆ ₹ 4,807ರಂತೆ ದರ ನಿಗದಿಪಡಿಸಲಾಗಿತ್ತು.

ADVERTISEMENT

2021ರ ಮೇ ತಿಂಗಳಿನಿಂದ 2021ರ ಸೆಪ್ಟೆಂಬರ್‌ವರೆಗೆ ಒಟ್ಟು ಆರು ಕಂತುಗಳಲ್ಲಿ ಚಿನ್ನದ ಬಾಂಡ್ ಯೋಜನೆಯನ್ನು ಜಾರಿಗೊಳಿಸುವುದಾಗಿ ಕೇಂದ್ರ ಸರ್ಕಾರವು ಈಗಾಗಲೇ ಹೇಳಿದ್ದು, ಅದರಂತೆ ಐದನೇ ಕಂತು ಸೋಮವಾರದಿಂದ ಆರಂಭವಾಗಲಿದೆ. ಕೇಂದ್ರ ಸರ್ಕಾರದ ಸಮ್ಮುಖದಲ್ಲಿ ಆರ್‌ಬಿಐ ಈ ಬಾಂಡ್‌ಗಳನ್ನು ವಿತರಣೆ ಮಾಡುತ್ತದೆ.

ಭೌತಿಕ ರೂಪದಲ್ಲಿ ನಿಷ್ಪ್ರಯೋಜಕವಾಗಿರುವ ಚಿನ್ನವನ್ನು ಬಳಕೆಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ 2015ರಲ್ಲಿ ಚಿನ್ನದ ಬಾಂಡ್‌ ಯೋಜನೆ ಜಾರಿಗೊಳಿಸಿತು. ಬ್ಯಾಂಕ್‌ಗಳು, ಆಯ್ದ ಅಂಚೆ ಕಚೇರಿಗಳು, ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎಸ್‌ಎಚ್‌ಸಿಐಎಲ್), ರಾಷ್ಟ್ರೀಯ ಮತ್ತು ಮುಂಬೈ ಷೇರು ವಿನಿಮಯ ಕೇಂದ್ರಗಳಲ್ಲಿ ಈ ಬಾಂಡ್‌ಗಳನ್ನು ಮಾರಾಟ ಮಾಡಲಾಗುವುದು.

ಕನಿಷ್ಠ ಹೂಡಿಕೆ 1 ಗ್ರಾಂ ಇರಲಿದೆ. ವೈಯಕ್ತಿಕ ಖರೀದಿದಾರರಿಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಕ್ಕೆ 4 ಕೆ.ಜಿ ಹಾಗೂ ಟ್ರಸ್ಟ್‌ಗಳಿಗೆ 20 ಕೆ.ಜಿಯ ಗರಿಷ್ಠ ಮಿತಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.