ನವದೆಹಲಿ: ‘ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಚಿನ್ನದ ಸಾಲ ಮಾರುಕಟ್ಟೆಯ ಗಾತ್ರ ₹15 ಲಕ್ಷ ಕೋಟಿಯಷ್ಟಾಗುವ ನಿರೀಕ್ಷೆ ಇದೆ’ ಎಂದು ರೇಟಿಂಗ್ ಸಂಸ್ಥೆ ಐಸಿಆರ್‌ಎ ಅಂದಾಜಿಸಿದೆ.
ಚಿನ್ನದ ದರದ ಏರಿಕೆಯಿಂದ, ಮಾರುಕಟ್ಟೆಯ ಗಾತ್ರ ಗರಿಷ್ಠ ಮಟ್ಟ ತಲುಪಿದೆ. ಎನ್‌ಬಿಎಫ್‌ಸಿಗಿಂತಲೂ ಬ್ಯಾಂಕ್‌ಗಳು ತ್ವರಿತವಾಗಿ ಬೆಳವಣಿಗೆ ಕಾಣುತ್ತಿವೆ ಎಂದು ಹೇಳಿದೆ.
2026–27ರ ಆರ್ಥಿಕ ವರ್ಷದಲ್ಲಿ ಚಿನ್ನದ ಸಾಲ ಮಾರುಕಟ್ಟೆಯ ಗಾತ್ರವು ₹18 ಲಕ್ಷ ಕೋಟಿ ಆಗಲಿದ್ದು, ಮಾರುಕಟ್ಟೆ ಗಾತ್ರವು ತ್ವರಿತವಾಗಿ ವಿಸ್ತಾರವಾಗಲಿದೆ ಎಂದು ಸಹ ಅಂದಾಜಿಸಿದೆ.
ಚಿನ್ನದ ಮೇಲಿನ ಸಾಲ ನೀಡಿಕೆಯಲ್ಲಿ ಬ್ಯಾಂಕ್‌ಗಳು ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ಶೇ 82ಕ್ಕೆ ಹೆಚ್ಚಿಸಿಕೊಂಡಿವೆ. 2019–20ರಿಂದ 2024–25ರವರೆಗೆ ಚಿನ್ನದ ಸಾಲದ ಸಂಪತ್ತಿನ ನಿರ್ವಹಣಾ ಮೌಲ್ಯವು ವಾರ್ಷಿಕ ಶೇ 26ರಷ್ಟು ಬೆಳವಣಿಗೆ ಸಾಧಿಸಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಶೇ 20ರಷ್ಟು ಪ್ರಗತಿ ಕಂಡಿವೆ.
ಕಳೆದ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಉದ್ಯಮದ ಒಟ್ಟಾರೆ ಸಂಪತ್ತಿನ ನಿರ್ವಹಣಾ ಮೌಲ್ಯವು (ಎಯುಎಂ) ₹11.8 ಲಕ್ಷ ಕೋಟಿಯಷ್ಟಾಗಿತ್ತು.
ಬ್ಯಾಂಕ್‌ಗಳಲ್ಲಿ ಚಿನ್ನದ ಆಭರಣಗಳ ಮೇಲೆ ವೈಯಕ್ತಿಕ ಸಾಲ ಪಡೆಯುವವರ ಪ್ರಮಾಣ ಶೇ 18ಕ್ಕೆ ಏರಿಕೆಯಾಗಿದ್ದರೆ, ಕೃಷಿ ಉದ್ದೇಶಕ್ಕೆ ಸಾಲ ಪಡೆಯುವವರ ಪ್ರಮಾಣ ಶೇ 70ರಿಂದ ಶೇ 63ಕ್ಕೆ ಇಳಿದಿದೆ.
ಜೂನ್ ಅಂತ್ಯದ ವೇಳೆಗೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಸಂಪತ್ತಿನ ನಿರ್ವಹಣಾ ಮೌಲ್ಯವು ಅಂದಾಜು ₹2.4 ಲಕ್ಷ ಕೋಟಿಯಷ್ಟಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 41ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.