ADVERTISEMENT

ಚಿನ್ನ: ಆಗಸ್ಟ್‌ಗೆ ಹೋಲಿಸಿದರೆ ₹10 ಸಾವಿರ ಇಳಿಕೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 16:44 IST
Last Updated 5 ಮಾರ್ಚ್ 2021, 16:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಹಿಂದಿನ ವರ್ಷದ ಆಗಸ್ಟ್‌ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಇದ್ದ ಶುದ್ಧ ಚಿನ್ನದ ಬೆಲೆಗೆ ಹೋಲಿಸಿದರೆ, ಈಗ ಶುದ್ಧ ಚಿನ್ನದ ಬೆಲೆಯಲ್ಲಿ ₹ 10,451ರಷ್ಟು ಇಳಿಕೆ ಆಗಿದೆ.

2020ರ ಆಗಸ್ಟ್‌ 7ರಂದು ಬೆಂಗಳೂರಿನಲ್ಲಿ ಹತ್ತು ಗ್ರಾಂ ಶುದ್ಧ ಚಿನ್ನದ ಬೆಲೆಯು ₹ 56,401 ಆಗಿತ್ತು. ಈಗ 10 ಗ್ರಾಂ ಚಿನ್ನದ ಬೆಲೆಯು ₹ 45,950ಕ್ಕೆ ಕುಸಿದಿದೆ. ‘ಚಿನ್ನದ ಮೇಲೆ ಹಣ ಹೂಡಿಕೆ ಮಾಡುವವರು ಈಗ ನಮ್ಮಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅವರು ಚಿನ್ನದ ಗಟ್ಟಿಗಳನ್ನು ಖರೀದಿಸುತ್ತಿದ್ದಾರೆ’ ಎಂದು ಬೆಂಗಳೂರು ಜ್ಯುವೆಲ್ಲರ್ಸ್‌ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ್ ಬಾಬು ತಿಳಿಸಿದರು.

ಲಾಕ್‌ಡೌನ್‌ನ ನಂತರ ಚಿನ್ನವು ಗರಿಷ್ಠ ಮಟ್ಟ ತಲುಪಿದ್ದ ಸಂದರ್ಭಕ್ಕೆ ಹೋಲಿಸಿದರೆ, ಈಗ ಆಭರಣಗಳ ಖರೀದಿಯಲ್ಲಿ ಕೂಡ ಹೆಚ್ಚಳ ಕಂಡುಬರುತ್ತಿದೆ ಎಂದು ಅವರು ತಿಳಿಸಿದರು. ‘ಚಿನ್ನದ ಮೇಲೆ ಹಣ ಹೂಡಿಕೆ ಮಾಡಲು ಇದು ಪ್ರಶಸ್ತ ಕಾಲ ಎಂದು ಅನಿಸುತ್ತಿದೆ. ಬೆಲೆ ಕಡಿಮೆ ಆಗಿರುವುದರಿಂದ ಆಭರಣ ಖರೀದಿ ಬಗ್ಗೆಯೂ ಆಲೋಚಿಸಬಹುದು’ ಎಂದು ಅವರು ಹೇಳಿದರು.

ADVERTISEMENT

‘ಚಿನ್ನದ ಬೆಲೆಯಲ್ಲಿ ಏರಿಳಿತ ಸಹಜ. ಚಿನ್ನದ ಆಭರಣ ಖರೀದಿಸುವ ಉದ್ದೇಶವೇ ಬೇರೆ, ಹೂಡಿಕೆಯ ದೃಷ್ಟಿಯಿಂದ ಚಿನ್ನದ ಗಟ್ಟಿ ಖರೀದಿಯೇ ಬೇರೆ. ಚಿನ್ನದಲ್ಲಿ ಹೂಡಿಕೆ ಮಾಡುವವರು ತಮ್ಮ ಒಟ್ಟು ಹೂಡಿಕೆಗಳ ಶೇಕಡ 10ರಿಂದ ಶೇ 15ರಷ್ಟನ್ನು ಮಾತ್ರ ಚಿನ್ನದ ಮೇಲೆ ತೊಡಗಿಸಿದರೆ ಸಾಕು’ ಎಂದು ವೈಯಕ್ತಿಕ ಹಣಕಾಸು ಸಲಹೆಗಾರರು ಹೇಳುತ್ತಾರೆ.

ನವದೆಹಲಿ

ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು ಪ್ರತಿ ಹತ್ತು ಗ್ರಾಂಗೆ ₹ 522ರಷ್ಟು ಇಳಿಕೆಯಾಗಿದ್ದು, ₹ 43,887ಕ್ಕೆ ಮಾರಾಟವಾಗಿದೆ. ಬೆಳ್ಳಿಯ ಬೆಲೆಯಲ್ಲಿ ಕೆ.ಜಿ.ಗೆ ₹ 1,822ರಂತೆ ಇಳಿಕೆ ಆಗಿದೆ. ಕೆ.ಜಿ. ಬೆಳ್ಳಿಯು ₹ 64,805ಕ್ಕೆ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.