ಚಿನ್ನ
ನವದೆಹಲಿ: ಚಿನ್ನದ ಧಾರಣೆಯು ಚಾರಿತ್ರಿಕ ದಾಖಲೆ ಮುಟ್ಟಿರುವುದು ಮಾರುಕಟ್ಟೆಯ ಮೇಲಷ್ಟೇ ಪರಿಣಾಮ ಬೀರಿಲ್ಲ. ದೇಶದ ಮಧ್ಯಮ ವರ್ಗದ ಜನರಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅದರಲ್ಲೂ ಮಹಿಳೆಯರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಚಿನಿವಾರ ಪೇಟೆ ತಜ್ಞರು ಹೇಳಿದ್ದಾರೆ.
ಏಪ್ರಿಲ್ 30ಕ್ಕೆ ಅಕ್ಷಯ ತೃತೀಯ ಹಬ್ಬವಿದೆ. ಅಲ್ಲದೆ, ಮದುವೆ ಋತು ಆರಂಭಗೊಂಡಿದ್ದು, ಮುಂದಿನ ತಿಂಗಳ ಅಂತ್ಯದವರೆಗೆ ನಡೆಯಲಿದೆ. ಈ ವೇಳೆ ಜನರು ಬಂಗಾರು ಖರೀದಿಸುವುದು ವಾಡಿಕೆ. ಆದರೆ, ನಿರೀಕ್ಷೆಗೂ ಮೀರಿ ಬೆಲೆ ಏರಿಕೆಯಾಗಿರುವುದು ಗ್ರಾಹಕರನ್ನು ಸಂಕಷ್ಟದ ಸುಳಿಗೆ ದೂಡಿದೆ ಎಂದು ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ 10 ಗ್ರಾಂ ಚಿನ್ನದ (ಶೇ 99.9 ಪರಿಶುದ್ಧತೆ) ಬೆಲೆಯು ₹1 ಲಕ್ಷ ದಾಟಿತ್ತು. ಆದರೆ, ಚೀನಾ ಮತ್ತು ಅಮೆರಿಕದ ನಡುವೆ ತಲೆದೋರಿದ್ಧ ಸುಂಕ ಸಮರ ಸ್ವಲ್ಪಮಟ್ಟಿಗೆ ತಣ್ಣಗಾಗುವ ಲಕ್ಷಣ ಗೋಚರಿಸಿದೆ. ಮತ್ತೊಂದೆಡೆ ಅಮೆರಿಕದ ಕೇಂದ್ರೀಯ ಬ್ಯಾಂಕ್ ಆದ ಫೆಡರಲ್ ರಿಸರ್ವ್ ಬಡ್ಡಿದರ ಕಡಿತದ ಸುಳಿವು ನೀಡಿದ್ದರಿಂದ ಹಳದಿ ಲೋಹದ ಬೆಲೆ ಇಳಿಕೆ ಕಂಡಿದೆ.
ಗುರುವಾರ 10 ಗ್ರಾಂ ಚಿನ್ನದ ದರ ₹99,400ಕ್ಕೆ ಇಳಿದಿದೆ. ಆದರೆ, ಈ ಬೆಳವಣಿಗೆಯು ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಖುಷಿಯನ್ನು ನೀಡಿಲ್ಲ.
‘ನವೆಂಬರ್‌ಗೆ ನನ್ನ ಪುತ್ರಿಯ ಮದುವೆ ನಿಗದಿಯಾಗಿದೆ. ನಿರೀಕ್ಷೆಗೂ ಮೀರಿ ಚಿನ್ನದ ಬೆಲೆ ಏರುಗತಿಯಾಗುತ್ತದೆ. ಹೀಗಿದ್ದಾಗ ಚಿನ್ನ ಖರೀದಿಸುವುದು ಹೇಗೆ?’ ಎಂದು ಪ್ರಶ್ನಿಸುತ್ತಾರೆ ನೋಯ್ಡಾದ ಗೃಹಿಣಿ ರೂಪಾ.
ಹಬ್ಬದ ಸಂದರ್ಭದಲ್ಲಿ ಮತ್ತು ಕುಟುಂಬದ ಶುಭ ಕಾರ್ಯಕ್ರಮಗಳ ವೇಳೆ ಮಹಿಳೆಯರು ಚಿನ್ನ ಖರೀದಿಸುವುದು ವಾಡಿಕೆ. ಬೆಲೆ ಏರಿಕೆ ಹೊರತಾಗಿಯೂ ಚಿನ್ನಾಭರಣ ಖರೀದಿಸದ ಹೊರತು ಮಂಗಳಕರ ಕಾರ್ಯಗಳನ್ನು ಖುಷಿಯಿಂದ ಆಚರಿಸುವುದು ಕಷ್ಟಕರ ಎಂಬುದು ಬಹುತೇಕ ಮಹಿಳೆಯರ ಅನಿಸಿಕೆ.
ಕಳೆದ ವರ್ಷದ ಡಿಸೆಂಬರ್‌ನಿಂದ ಇಲ್ಲಿಯವರೆಗೆ 10 ಗ್ರಾಂ ಚಿನ್ನದ ಬೆಲೆಯು ₹22,650 ಹೆಚ್ಚಳವಾಗಿದೆ (ಶೇ 29ರಷ್ಟು). ಷೇರುಪೇಟೆಯ ಪರಿಣತರ ಪ್ರಕಾರ, ಷೇರು ಮತ್ತು ಬಾಂಡ್‌ಗಳಲ್ಲಿ ಹೂಡಿಕೆಗಿಂತಲೂ ಚಿನ್ನದ ಮೇಲಿನ ಹೂಡಿಕೆಯು ಹೆಚ್ಚು ಲಾಭ ತಂದುಕೊಟ್ಟಿದೆ.
ಬೆಲೆ ಏರಿಕೆಯು ಖರೀದಿ ಮೇಲೆ ಪರಿಣಾಮ ಬೀರಿದೆ. ಚಿನ್ನ ಮಾರಾಟ ವಲಯಕ್ಕೂ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಆಭರಣ ಮಳಿಗೆಗೆ ಗ್ರಾಹಕರು ಭೇಟಿ ನೀಡುತ್ತಾರೆ. ಆದರೆ, ದರ ಹೆಚ್ಚಳದಿಂದ ಅವರಲ್ಲಿ ಖರೀದಿ ಉತ್ಸಾಹ ಕಂಡುಬರುವುದಿಲ್ಲ ಎಂದು ಆಭರಣ ಮಳಿಗೆಯ ಮಾಲೀಕರು ಹೇಳುತ್ತಾರೆ.
‘ಈ ಮೊದಲು ಅಂಗಡಿ ಭೇಟಿ ನೀಡುತ್ತಿದ್ದ ಗ್ರಾಹಕರು ಆಭರಣಗಳ ವಿನ್ಯಾಸದ ಬಗ್ಗೆ ಕೇಳುತ್ತಿದ್ದರು. ಈಗ ಬೆಲೆ ಕೇಳಿ ವಾಪಸ್ ಹೋಗುತ್ತಿದ್ದಾರೆ. ಬೆಲೆ ಹೀಗೆಯೇ ಮುಂದುವರಿದರೆ ಸಣ್ಣ ಆಭರಣಗಳ ಅಂಗಡಿಗಳು ಬಾಗಿಲು ಮುಚ್ಚುವ ಸ್ಥಿತಿ ಸೃಷ್ಟಿಯಾಗಲಿದೆ. ಅಲ್ಲದೆ, ವ್ಯವಹಾರ ಕೂಡ ಇಳಿಕೆಯಾಗಲಿದೆ. ಈ ಉದ್ಯಮವನ್ನು ಅವಲಂಬಿಸಿರುವ ಲಕ್ಷಾಂತರ ಕುಟುಂಬಗಳ ಬದುಕು ಬೀದಿಗೆ ಬೀಳಲಿದೆ’ ಎಂದು ದೆಹಲಿಯ ಮಯೂರ್ ವಿಹಾರ್‌ನ ಊರ್ಮಿಳಾ ಆಭರಣ ಅಂಗಡಿಯ ಮಾಲೀಕ ಸೋನು ಹೇಳುತ್ತಾರೆ.
ದೇಶದಲ್ಲಿ ಚಿನ್ನವನ್ನು ಆಭರಣದ ದೃಷ್ಟಿಯಲ್ಲಷ್ಟೇ ನೋಡುವುದಿಲ್ಲ. ಅತ್ಯುತ್ತಮ ಹೂಡಿಕೆಯಾಗಿಯೂ ಗ್ರಾಹಕರು ನೋಡುತ್ತಾರೆ. ಅಲ್ಲದೆ ಆಪತ್ಕಾಲದಲ್ಲಿ ಚಿನ್ನವು ನೆರವಿಗೆ ಬರುವುದರಿಂದ ಭಾರತೀಯ ಕುಟುಂಬಗಳಲ್ಲಿ ಚಿನ್ನ ಖರೀದಿ ಪ್ರಮಾಣ ಹೆಚ್ಚಿದೆ.
ಭಾರತ ಸೇರಿ ವಿಶ್ವದ ಬಹುತೇಕ ದೇಶಗಳ ಜನರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರುವ ಪ್ರಮಾಣ ಹೆಚ್ಚುತ್ತಿದೆ. ವಿಶ್ವ ಚಿನ್ನ ಸಮಿತಿಯ ಮಾಹಿತಿ ಪ್ರಕಾರ ಭಾರತದ ಮಹಿಳೆಯರ ಬಳಿ 24 ಸಾವಿರ ಟನ್‌ಗೂ ಹೆಚ್ಚು ಬಂಗಾರವಿದೆ. ಇದು ವಿಶ್ವದ ಒಟ್ಟು ಚಿನ್ನದ ಶೇ 11ರಷ್ಟು ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.