ADVERTISEMENT

ಶುಭ ನವರಾತ್ರಿಗೆ ಚಿನ್ನದ ಖರೀದಿ: ಶುದ್ಧತೆಯ ಬಗ್ಗೆ ಗಮನ ನೀಡಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 19:30 IST
Last Updated 8 ಅಕ್ಟೋಬರ್ 2021, 19:30 IST
ದಕ್ಷಿಣ ಭಾರತ ಆಭರಣ ಮೇಳ ವರಮಹಾಲಕ್ಷ್ಮಿಯ ಲಕ್ಷ್ಮೀ ವಿನ್ಯಾಸದ ಆಭರಣಗಳ ಪ್ರದರ್ಶನ ಮೇಳವು ನಗರದ ಜೆ.ಡಬ್ಲ್ಯೂ. ಮ್ಯಾರಿಯೆಟ್ ಹೋಟೆಲ್,ನಲ್ಲಿ ಶುಕ್ರವಾರ ಪ್ರದರ್ಶನ ನಡೆಯಿತು. ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ದಕ್ಷಿಣ ಭಾರತ ಆಭರಣ ಮೇಳ ವರಮಹಾಲಕ್ಷ್ಮಿಯ ಲಕ್ಷ್ಮೀ ವಿನ್ಯಾಸದ ಆಭರಣಗಳ ಪ್ರದರ್ಶನ ಮೇಳವು ನಗರದ ಜೆ.ಡಬ್ಲ್ಯೂ. ಮ್ಯಾರಿಯೆಟ್ ಹೋಟೆಲ್,ನಲ್ಲಿ ಶುಕ್ರವಾರ ಪ್ರದರ್ಶನ ನಡೆಯಿತು. ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.   

ಭಾರತೀಯರಿಗೆ ಚಿನ್ನ ಖರೀದಿಸಲು ಶುಭ ಸಂದರ್ಭಗಳನ್ನು ಹುಡುಕಬೇಕಾಗಿಲ್ಲ. ಮದುವೆ, ಮುಂಜಿ, ಮಗುವಿನ ನಾಮಕರಣದಂತಹ ಮಂಗಳ ಕಾರ್ಯಗಳು ಹಾಗೂ ಯುಗಾದಿ, ಅಕ್ಷಯ ತೃತೀಯ, ವಿಜಯ ದಶಮಿ ಅಥವಾ ದುಶ್ಶೀರ, ಧನ್‌ತೇರಾಸ್‌... ಹೀಗೆ ಬಂಗಾರದೊಡವೆ ಕೊಂಡು ಧರಿಸಿ ಖುಷಿ ಪಡಲು, ಹೂಡಿಕೆ ಎಂದೆಲ್ಲ ಹಾಕಲು ಒಂದಿಷ್ಟು ದಿನಗಳು ಮೀಸಲಾಗಿವೆ.

ಸದ್ಯಕ್ಕೆ ವಿಜಯ ದಶಮಿ ಹತ್ತಿರವಿದೆ. ದುರ್ಗಾ ಮಾತೆಯನ್ನು ಪೂಜಿಸುವ ಈ ಸಂದರ್ಭದಲ್ಲಿ, ಶುಭ ಮುಹೂರ್ತದಲ್ಲಿ ಹೂಡಿಕೆಯಾಗಿ, ಲಕ್ಷ್ಮಿ ಮನೆಗೆ ಬಂದರೆ ಒಳಿತಾಗುತ್ತದೆ ಎಂಬ ನಂಬಿಕೆಯಿಂದ ಹಲವರು ತಮ್ಮ ಕೈಲಾದಷ್ಟು ಚಿನ್ನ ಖರೀದಿಸಿ ಸಂಗ್ರಹಿಸುವ ಸಂಪ್ರದಾಯವಿದೆ.

ಹಾಗೆಯೇ ದೇವಿ ದುರ್ಗೆಯ ಅವತಾರವಾದ ಚಾಮುಂಡಿ ಕೆಟ್ಟ ಶಕ್ತಿಯಾದ ಮಹಿಷಾಸುರನನ್ನು ಸಂಹರಿಸಿದ ವಿಜಯದಶಮಿಯ ದಿನ ನವಜೀವನದ ಆರಂಭ; ಹಾಗೆಯೇ ದುಶ್ಶೀರಾ ಎಂದರೆ ಶ್ರೀರಾಮ ರಾವಣನನ್ನು ಸಂಹರಿಸಿದ ದಿನ ಎಂದು ಉತ್ತರ ಭಾರತೀಯರು ಆಚರಿಸುತ್ತಾರೆ. ಹೀಗಾಗಿ ಚಿನ್ನ, ಅಂದರೆ ಅಮೂಲ್ಯ ಲೋಹದ ಖರೀದಿಯು ಈ ಮಂಗಳಕರ ದಿನದಂದು ಅದೃಷ್ಟ ತರುತ್ತದೆ ಎಂಬ ನಂಬಿಕೆ ಹಲವರಲ್ಲಿ.

ADVERTISEMENT

ಶುದ್ಧ ಚಿನ್ನಕ್ಕೆ ಆದ್ಯತೆ

ಚಿನ್ನ ಖರೀದಿಸುವಾಗ ಶುದ್ಧತೆಯ ಬಗ್ಗೆ ಗಮನ ನೀಡಿ ಎನ್ನುತ್ತಾರೆ ತಜ್ಞರು. ಅಪರಂಜಿ ಚಿನ್ನದ ಬಿಸ್ಕತ್‌ ಅಥವಾ ಪವನ್‌ ಅಂದರೆ ಚಿನ್ನದ ನಾಣ್ಯಗಳನ್ನು ಖರೀದಿಸಬಹುದು. ಇದನ್ನು ಹಾಗೇ ಕಾದಿಟ್ಟು, ಬೇಕಾದಾಗ ಕರಗಿಸಿ ಒಡವೆ ಮಾಡಿಸಿಕೊಳ್ಳಬಹುದು.

ಸದ್ಯಕ್ಕಂತೂ ಯುವತಿಯರು ಹಗುರವಾದ, ನೂತನ ವಿನ್ಯಾಸದ ಬಂಗಾರದ ಒಡವೆಗಳ ಬಗ್ಗೆ ಒಲವು ಹೊಂದಿದ್ದಾರೆ ಎನ್ನುವುದು ಚಿನ್ನದ ವ್ಯಾಪಾರಿಗಳ ಅಂಬೋಣ. 22 ಕ್ಯಾರೆಟ್‌ ಶುದ್ಧತೆಯ ಚಿನ್ನದಲ್ಲಿ ಮಾಡಿದ ಈ ಹಗುರವಾದ ಆಭರಣಗಳನ್ನು ಖರೀದಿಸಿ ನಿತ್ಯ ಧರಿಸಬಹುದು.

ಮುಂದೆ ಕುಟುಂಬದಲ್ಲಿ ಬರಲಿರುವ ಶುಭ ಸಮಾರಂಭಕ್ಕಾಗಿ ನೆಕ್ಲೇಸ್‌, ಉದ್ದನೆಯ ಹಾರದಂತಹ ಹೆಚ್ಚು ತೂಕವುಳ್ಳ ಚಿನ್ನದ ಒಡವೆಗಳನ್ನು ಖರೀದಿಸಿ ಇಟ್ಟುಕೊಳ್ಳಬಹುದು. 25– 30 ಗ್ರಾಂ ತೂಕದ ಒಡವೆಗಳು, ಅದರಲ್ಲೂ ಮಾಣಿಕ್ಯ, ಪಚ್ಚೆ, ನೀಲದಂತಹ ಅಮೂಲ್ಯ ಹರಳುಗಳನ್ನು ಹೊಂದಿಸಿದ ಒಡವೆಗಳು ರೇಷ್ಮೆ ಸೀರೆಯಂತಹ ಸಾಂಪ್ರದಾಯಿಕ ಉಡುಗೆಗೆ ಸೂಕ್ತವಾಗಿ ಹೊಂದುತ್ತವೆ. ಈಗ ಒಡವೆಗಳ ಮಳಿಗೆಗಳಲ್ಲಿ ನೆಕ್ಲೇಸ್‌ಗೆ ಹೊಂದುವಂತಹ ಬಳೆ, ಕಿವಿಯೋಲೆ ಕೂಡ ಲಭ್ಯ.

ಕಳೆದ ಕೆಲವು ದಿನಗಳಿಂದ ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದ್ದು, ಒಡವೆ, ನಾಣ್ಯಗಳ ಖರೀದಿಯತ್ತ ಮಖ ಮಾಡಬಹುದು. ಚಿನ್ನದ ಬಾಂಡ್‌ಗಳಲ್ಲೂ ಹೂಡಿಕೆ ಮಾಡಬಹುದು. ಆದರೆ ಹಾಲ್‌ ಮಾರ್ಕ್‌ ಇರುವ, ವಾಪಸ್ಸು ಖರೀದಿಸುವ ಗ್ಯಾರಂಟಿ ನೀಡುವ ಚಿನ್ನದ ವ್ಯಾಪಾರಿಗಳಿಂದ ಒಡವೆ ಖರೀದಿಸುವುದನ್ನು ಮರೆಯಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.