ADVERTISEMENT

ಚಿನ್ನ, ಬೆಳ್ಳಿ ಬೆಲೆ ತಗ್ಗದು: ಆರ್ಥಿಕ ಸಮೀಕ್ಷೆ ವರದಿಯಲ್ಲಿ ಉಲ್ಲೇಖ

ಪಿಟಿಐ
Published 29 ಜನವರಿ 2026, 17:02 IST
Last Updated 29 ಜನವರಿ 2026, 17:02 IST
<div class="paragraphs"><p>ಚಿನ್ನ, ಬೆಳ್ಳಿ ಬೆಲೆ ತಗ್ಗದು: ಆರ್ಥಿಕ ಸಮೀಕ್ಷೆ ವರದಿಯಲ್ಲಿ ಉಲ್ಲೇಖ</p></div>

ಚಿನ್ನ, ಬೆಳ್ಳಿ ಬೆಲೆ ತಗ್ಗದು: ಆರ್ಥಿಕ ಸಮೀಕ್ಷೆ ವರದಿಯಲ್ಲಿ ಉಲ್ಲೇಖ

   

ನವದೆಹಲಿ: ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆಗಳು ಮುಂದುವರಿದಿರುವ ಕಾರಣದಿಂದಾಗಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯು ಹೆಚ್ಚಿನ ಮಟ್ಟದಲ್ಲಿಯೇ ಇರುವ ನಿರೀಕ್ಷೆ ಇದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಗುರುವಾರ ಮಂಡಿಸಿರುವ ‘ಆರ್ಥಿಕ ಸಮೀಕ್ಷೆ 2025–26’ ವರದಿ ಹೇಳಿದೆ.

ವಿಶ್ವ ಮಟ್ಟದಲ್ಲಿ ಬಹುಕಾಲ ಉಳಿಯುವಂತಹ ಶಾಂತಿ ಸ್ಥಾಪನೆ ಆಗದೆ ಇದ್ದರೆ, ವ್ಯಾಪಾರ ಸಮರಕ್ಕೆ ಪರಿಹಾರ ಕಂಡುಕೊಳ್ಳದೆ ಇದ್ದರೆ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಕಡಿಮೆ ಆಗದು ಎಂದು ಆರ್ಥಿಕ ಸಮೀಕ್ಷೆ ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಚಿನ್ನ ಮತ್ತು ಬೆಳ್ಳಿಯ ಬೆಲೆಯು ಏರುಹಾದಿಯಲ್ಲಿ ಇದೆ. ಇವುಗಳ ಬೆಲೆ ಏರಿಕೆಯು ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಹೆಚ್ಚಾಗಿರುವುದನ್ನು, ಸುರಕ್ಷಿತ ಹೂಡಿಕೆಗಳಿಗೆ ಬೇಡಿಕೆ ಹೆಚ್ಚಾಗಿರುವುದನ್ನು ತೋರಿಸುತ್ತಿದೆ ಎಂದು ಸಮೀಕ್ಷೆ ಹೇಳಿದೆ.

ಆದರೆ, ಬೆಳ್ಳಿ ಹಾಗೂ ಚಿನ್ನವು 2025ರಲ್ಲಿ ಕಂಡಂತಹ ಬೆಲೆ ಏರಿಕೆಯು ಬಹುಕಾಲ ಉಳಿಯಲಿಕ್ಕಿಲ್ಲ ಎಂದು ಕೆಲವು ತಜ್ಞರು ಹೇಳಿರುವುದಾಗಿ ಸಮೀಕ್ಷೆಯು ಉಲ್ಲೇಖಿಸಿದೆ.

2024–25ರಲ್ಲಿ ಭಾರತವು ಆಮದು ಮಾಡಿಕೊಂಡ ಚಿನ್ನದ ಪ್ರಮಾಣವು ಅದರ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇಕಡ 27.4ರಷ್ಟು ಹೆಚ್ಚಳ ಕಂಡಿದೆ. ಚಿನ್ನದ ಬೆಲೆಯು ಒಂದು ವರ್ಷದ ಅವಧಿಯಲ್ಲಿ ಶೇ 38.2ರಷ್ಟು ಹೆಚ್ಚಾಗಿದ್ದುದು, ದೇಶದಲ್ಲಿ ಚಿನ್ನದ ಬಳಕೆ ಹೆಚ್ಚಾಗಿದ್ದುದು ಆಮದು ಹೆಚ್ಚಾಗುವುದಕ್ಕೆ ಕಾರಣ ಆಗಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.