ADVERTISEMENT

ಸುಳ್ಳು ಮಾಹಿತಿ ತಡೆ: ಚುನಾವಣಾ ಆಯೋಗದ ಜತೆ ಕೈಜೋಡಿಸಿದ ಗೂಗಲ್

ಪಿಟಿಐ
Published 12 ಮಾರ್ಚ್ 2024, 14:22 IST
Last Updated 12 ಮಾರ್ಚ್ 2024, 14:22 IST
   

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಸುಳ್ಳು ಮಾಹಿತಿಗಳನ್ನು ಹರಡದಂತೆ ಕಡಿವಾಣ ಹಾಕಲು ಕೇಂದ್ರ ಚುನಾವಣಾ ಆಯೋಗದ (ಇಸಿಐ) ಜೊತೆಗೆ ಕೈಜೋಡಿಸಲಾಗುವುದು ಎಂದು ಗೂಗಲ್‌ ಇಂಡಿಯಾ ತಿಳಿಸಿದೆ.

ದೇಶದಲ್ಲಿ ನಡೆದಿರುವ ವಿವಿಧ ಚುನಾವಣೆಗಳಿಗೆ ಸಂಬಂಧಿಸಿದ ಅಧಿಕೃತ ಮಾಹಿತಿ ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ದತ್ತಾಂಶದ ಬಗ್ಗೆ ಬಳಕೆದಾರರಿಗೆ ಸುಲಭವಾಗಿ ಅರ್ಥವಾಗುವಂತೆ ಪ್ರಕಟಿಸಲಾಗುವುದು ಎಂದು ಹೇಳಿದೆ. 

‘ಮತದಾರರ ನೋಂದಣಿ, ಮತ ಚಲಾವಣೆ ಸೇರಿದಂತೆ ಇತರೆ ಮಾಹಿತಿ ಬಗ್ಗೆ ಮತದಾರರು ಗೂಗಲ್‌ನಲ್ಲಿ ಹುಡುಕಾಟ ನಡೆಸುತ್ತಾರೆ. ಆಯೋಗದ ಸಹಭಾಗಿತ್ವದಡಿ ಈ ಮಾಹಿತಿಯನ್ನು ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಪ್ರಕಟಿಸಲಾಗುವುದು’ ಎಂದು ತಿಳಿಸಿದೆ. 

ADVERTISEMENT

ಬಹಳಷ್ಟು ಜನರು ಕೃತಕ ಬುದ್ಧಿಮತ್ತೆ ಬಳಸಿಕೊಂಡು ಮಾಹಿತಿಗಳನ್ನು ಸೃಷ್ಟಿಸುತ್ತಾರೆ. ಈ ಬಗ್ಗೆ ಬಳಕೆದಾರರಿಗೆ ಸ್ಪಷ್ಟವಾದ ತಿಳಿವಳಿಕೆ ನೀಡುವ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ ಎಂದು ಹೇಳಿದೆ. 

ಕೆಲವರು ಜಾಹೀರಾತುಗಳ ಸೃಷ್ಟಿಗೂ ಎ.ಐ ತಂತ್ರಜ್ಞಾನ ಬಳಸಿಕೊಳ್ಳುತ್ತಾರೆ. ಗೂಗಲ್‌ ಬಳಕೆದಾರರಿಗೆ ಅದು ಸುಲಭವಾಗಿ ಅರ್ಥವಾಗುವುದಿಲ್ಲ. ಈ ಬಗ್ಗೆಯೂ ಅರಿವು ಮೂಡಿಸಲಾಗುತ್ತದೆ. ಜನರನ್ನು ದಿಕ್ಕುತಪ್ಪಿಸುವಂತಹ ಜಾಹೀರಾತುಗಳಿಗೆ ಕಂಪನಿಯು ಪ್ರೋತ್ಸಾಹ ನೀಡುವುದಿಲ್ಲ. ಡೀ‍ಪ್‌ಫೇಕ್‌ ವಿಡಿಯೊಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದೆ.

ಯೂಟ್ಯೂಬ್‌ನಲ್ಲಿ ವಿಡಿಯೊಗಳ ರಚನೆಗೆ ಕೃತಕ ಬುದ್ಧಿಮತ್ತೆ ಸಾಧನಗಳನ್ನು ಬಳಸಲು ‘ಡ್ರೀಮ್ ಸ್ಕ್ರೀನ್’ ಯೋಜನೆ ರೂಪಿಸಲಾಗಿದೆ. ಈ ವಿಡಿಯೊಗಳು ನೈಜವಾಗಿವೆಯೇ ಅಥವಾ ಕೃತಕವಾಗಿ ತಯಾರಿಸಲಾಗಿದೆಯೇ ಎಂಬ ಬಗ್ಗೆ ಪ್ರದರ್ಶನದ ವೇಳೆ ಮಾಹಿತಿ ಪ್ರಕಟಿಸಲಾಗುತ್ತದೆ. ಇದರಿಂದ ಬಳಕೆದಾರರು ವಿಡಿಯೊಗಳ ಸತ್ಯಾಸತ್ಯತೆಯನ್ನು ಅರಿಯಲು ನೆರವಾಗಲಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.