ADVERTISEMENT

ವಿತ್ತೀಯ ಕೊರತೆ ನೀಗಿಸಲು ಸರ್ಕಾರ ಮಾರ್ಗಸೂಚಿ ರೂಪಿಸಬೇಕು: ಮಾಂಟೆಕ್ ಸಿಂಗ್

​ಪ್ರಜಾವಾಣಿ ವಾರ್ತೆ
Published 3 ಜನವರಿ 2025, 6:59 IST
Last Updated 3 ಜನವರಿ 2025, 6:59 IST
   

ನವದೆಹಲಿ: ದೇಶದ ಅತ್ಯಧಿಕ ವಿತ್ತೀಯ ಕೊರತೆ ಕುರಿತಂತೆ ತೀವ್ರ ಕಳವಳ ವ್ಯಕ್ತಪಡಿಸಿರುವ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯ, ಇತರೆ ಅಭಿವೃದ್ಧಿಶೀಲ ದೇಶಗಳಿಗೆ ಹೋಲಿಸಿದರೆ ಇದು ಅತ್ಯಧಿಕವಾಗಿದೆ. ಖಾಸಗಿ ಹೂಡಿಕೆಗಳಿಗೆ ಇದು ತೊಡಕಾಗಿದೆ ಎಂದಿದ್ದಾರೆ.

ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಅವರು, ಆರ್ಥಿಕತೆಯು ಬೆಳವಣಿಗೆಯ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿತ್ತೀಯ ಕೊರತೆಯನ್ನು ಕಡಿಮೆ ಮಾಡಲು ಸ್ಪಷ್ಟ ಮಾರ್ಗಸೂಚಿಯನ್ನು ರಚಿಸುವ ತುರ್ತು ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.

ವಿತ್ತೀಯ ಕೊರತೆಯನ್ನು ತಗ್ಗಿಸಲು ಸ್ಪಷ್ಟ ಮಾರ್ಗಸೂಚಿಯ ಅಗತ್ಯವನ್ನು ಪ್ರತಿಪಾದಿಸಿರುವ ಅವರು, ಸರ್ಕಾರದ ವಿತ್ತೀಯ ಗುರಿಗಳನ್ನು ಉಲ್ಲೇಖಿಸಿ, ಗುರಿ ಸಾಧನೆಗೆ ಸಾಲ-ಜಿಡಿಪಿ ಅನುಪಾತದ ಅಂತರವನ್ನು ಗಣನೀಯವಾಗಿ ಕಡಿಮೆ ಮಾಡಲು ಮತ್ತಷ್ಟು ಸುಧಾರಣೆಯ ಅಗತ್ಯವಿದೆ. ಈ ಬಗ್ಗೆ ಸರ್ಕಾರದ ಯೋಜನೆ ಏನಿದೆ ಎಂಬುದು ನನಗೆ ‌‌‌ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ADVERTISEMENT

ಭಾರತದ ವಿತ್ತೀಯ ಕೊರತೆಯು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಖಾಸಗಿ ಹೂಡಿಕೆಗೆ ತೊಡಕಾಗಿದೆ ಎಂದಿದ್ದಾರೆ.

ಕೇಂದ್ರ ಮತ್ತು ರಾಜ್ಯಗಳ ಒಟ್ಟು ವಿತ್ತೀಯ ಕೊರತೆಯು ಜಿಡಿಪಿಯ ಶೇಕಡ 8ರ ಸಮೀಪದಲ್ಲಿದೆ ಎಂದು ಅಂದಾಜಿಸಲಾಗಿದೆ. ಇದು ಇತರೆ ಅಭಿವೃದ್ಧಿಶೀಲ ರಾಷ್ಟ್ರಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಖಾಸಗಿ ಹೂಡಿಕೆ ಒಳಗೊಂಡ ಆರ್ಥಿಕ ವ್ಯವಸ್ಥೆ ಬೆಳೆಯಬೇಕೆಂದರೆ ವಿತ್ತೀಯ ಕೊರತೆ ತಗ್ಗಿಸಬೇಕು. ಇದು ಕೇವಲ ಕೇಂದ್ರದ ವಿತ್ತೀಯ ಕೊರತೆ ಮಾತ್ರವಲ್ಲ. ರಾಜ್ಯಗಳ ವಿತ್ತೀಯ ಕೊರತೆಯೂ ಸೇರಿದೆ. ರಾಜ್ಯಗಳು ಸಹ ಅತ್ಯಧಿಕ ವಿತ್ತೀಯ ಕೊರತೆ ಎದುರಿಸುತ್ತಿವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.