ನವದೆಹಲಿ: ಸುಂಕ ಮುಕ್ತ (ಸುಂಕ ರಹಿತ) ಉದ್ದು ಆಮದು ಮಾಡಿಕೊಳ್ಳಲು ಇರುವ ಗಡುವನ್ನು 2026ರ ಮಾರ್ಚ್ 31ರವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ.
ಈ ಮೊದಲಿದ್ದ ಆದೇಶ ಇದೇ ಮಾರ್ಚ್‌ಗೆ ಅಂತ್ಯವಾಗುತ್ತಿತ್ತು. ಇದೀಗ ಸರ್ಕಾರ ಗಡುವನ್ನು ಮತ್ತೆ ವಿಸ್ತರಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಸರಕುಗಳ ಬೆಲೆಯಲ್ಲಿ ಸ್ಥಿರತೆ ತರಲು ಇದು ನೆರವಾಗಲಿದೆ ಎಂದು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ತಿಳಿಸಿದೆ.
ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ನವೆಂಬರ್‌ವರೆಗೂ ₹5,242 ಕೋಟಿ ಮೌಲ್ಯದ ಉದ್ದು ಆಮದಾಗಿದೆ. ಈ ಪೈಕಿ ಮ್ಯಾನ್ಮಾರ್‌ನಿಂದಲೇ ₹4,788 ಕೋಟಿ ಮೌಲ್ಯದಷ್ಟು ಆಮದಾಗಿದೆ.
2023–24ರ ಆರ್ಥಿಕ ವರ್ಷದಲ್ಲಿ ₹5,783 ಕೋಟಿ ಮೌಲ್ಯದಷ್ಟು (ಮ್ಯಾನ್ಮಾರ್‌ನಿಂದ ₹5,636 ಕೋಟಿ) ಆಮದಾಗಿತ್ತು. ಮ್ಯಾನ್ಮಾರ್‌ನಿಂದ ಭಾರತಕ್ಕೆ ಹೆಚ್ಚಿನ ಪ್ರಮಾಣದ ಉದ್ದು ಆಮದಾಗುತ್ತದೆ. ಜೊತೆಗೆ ಸಿಂಗಪುರ, ಥಾಯ್ಲೆಂಡ್ ಮತ್ತು ಬ್ರೆಜಿಲ್‌ನಿಂದಲೂ ಉದ್ದು ಆಮದಾಗುತ್ತದೆ ಎಂದು ತಿಳಿಸಿದೆ.
ಭಾರತದಲ್ಲಿ ಮಧ್ಯಪ್ರದೇಶ, ಆಂಧ್ರಪ್ರದೇಶ, ಉತ್ತರಪ‍್ರದೇಶ, ರಾಜಸ್ಥಾನ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಪ್ರಮುಖವಾಗಿ ಉದ್ದು ಬೆಳೆಯಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.