ADVERTISEMENT

ವಿಶೇಷ ಬಳಕೆಯ ಉಕ್ಕು ವಲಯದಲ್ಲಿ ಹೂಡಿಕೆ: ಮೂರನೆಯ ಸುತ್ತಿನ ಪಿಎಲ್‌ಐಗೆ ಚಾಲನೆ

ಪಿಟಿಐ
Published 4 ನವೆಂಬರ್ 2025, 15:34 IST
Last Updated 4 ನವೆಂಬರ್ 2025, 15:34 IST
ಉಕ್ಕು
ಉಕ್ಕು   

ನವದೆಹಲಿ: ವಿಶೇಷ ಬಳಕೆ ಉದ್ದೇಶದ ಉಕ್ಕು ತಯಾರಿಕಾ ವಲಯದಲ್ಲಿ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮೂರನೆಯ ಸುತ್ತಿನ ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯನ್ನು ಮಂಗಳವಾರ ಆರಂಭಿಸಿದೆ.

ದೇಶಿ ಉತ್ಪಾದನೆ ಹೆಚ್ಚಿಸುವುದು ಹಾಗೂ ಆಮದನ್ನು ತಗ್ಗಿಸುವುದು ಕೂಡ ಪಿಎಲ್‌ಐ ಯೋಜನೆಯ ಉದ್ದೇಶಗಳಲ್ಲಿ ಒಂದಾಗಿದೆ. ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ಯೋಜನೆಗೆ ಚಾಲನೆ ನೀಡಿದರು.

ರಕ್ಷಣೆ, ವೈಮಾಂತರಿಕ್ಷ, ಇಂಧನ, ವಾಹನ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಬಳಕೆ ಮಾಡುವ ‘ವಿಶೇಷ ಬಳಕೆ ಉದ್ದೇಶದ ಉಕ್ಕು’ ತಯಾರಿಕಾ ವಲಯಕ್ಕೆ ಸಂಬಂಧಿಸಿದ ಪಿಎಲ್‌ಐ ಯೋಜನೆಗೆ ಕೇಂದ್ರ ಸಚಿವ ಸಂಪುಟವು 2021ರ ಜುಲೈನಲ್ಲಿ ಒಪ್ಪಿಗೆ ನೀಡಿತ್ತು. ಇದಕ್ಕೆ ₹6,322 ಕೋಟಿ ಅನುದಾನ ನಿಗದಿ ಮಾಡಲಾಗಿತ್ತು.

ADVERTISEMENT

ಈ ಯೋಜನೆಯು ಮೊದಲ ಎರಡು ಸುತ್ತುಗಳಲ್ಲಿ ಇದುವರೆಗೆ ₹43,874 ಕೋಟಿ ಹೂಡಿಕೆಯನ್ನು ಆಕರ್ಷಿಸಿದೆ. ಈ ಪೈಕಿ ₹22,973 ಕೋಟಿ ಈಗಾಗಲೇ ಹೂಡಿಕೆ ಆಗಿದೆ. ಅಲ್ಲದೆ, ಮೊದಲ ಎರಡು ಸುತ್ತುಗಳ ಮೂಲಕ 13 ಸಾವಿರಕ್ಕೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿದೆ.

‘ಮೊದಲ ಎರಡು ಸುತ್ತುಗಳಲ್ಲಿ ದೊರೆತ ಸ್ಪಂದನವು ಉತ್ತೇಜನಕಾರಿಯಾಗಿದೆ. ಆ ಯಶಸ್ಸು ಸುಧಾರಣೆ ಆಧಾರಿತ ಹಾಗೂ ಕೈಗಾರಿಕೆಗಳಿಗೆ ಅಗತ್ಯವಿರುವ ನೀತಿಗಳ ಶಕ್ತಿಯನ್ನು ಹೇಳುತ್ತಿದೆ’ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

‘ಈ ಯೋಜನೆಯ ಮೂಲಕ ನಾವು ಭಾರತದಲ್ಲಿ ಉಕ್ಕು ತಯಾರಿಕೆ ಮಾಡುವುದಕ್ಕೆ ಮಾತ್ರ ಗಮನ ನೀಡುತ್ತಿಲ್ಲ. ಬದಲಿಗೆ, ಭಾರತದಿಂದ ಜಗತ್ತಿಗೆ ಉಕ್ಕು ಪೂರೈಕೆ ಮಾಡುವತ್ತಲೂ ಆಲೋಚನೆ ಹೊಂದಿದ್ದೇವೆ’ ಎಂದು ಹೇಳಿದ್ದಾರೆ.

ಯೋಜನೆಯ ಮೂರನೆಯ ಸುತ್ತು ಹೊಸ ಉದ್ದಿಮೆಗಳಿಗೆ ಹಾಗೂ ಈಗಾಗಲೇ ಇರುವ ಉದ್ದಿಮೆಗಳಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.