ADVERTISEMENT

ರಷ್ಯಾ-ಉಕ್ರೇನ್‌ ವಾರ್: ಎಲ್‌ಐಸಿ ಐಪಿಒ ಮುಂದೂಡಿಕೆ ಸಾಧ್ಯತೆ

ಪಿಟಿಐ
Published 2 ಮಾರ್ಚ್ 2022, 13:46 IST
Last Updated 2 ಮಾರ್ಚ್ 2022, 13:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಷ್ಯಾ–ಉಕ್ರೇನ್‌ ಸಂಘರ್ಷವು ಜಾಗತಿಕ ಹಣಕಾಸು ಮಾರುಕಟ್ಟೆಯ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿರುವ ಕಾರಣ ಕೇಂದ್ರ ಸರ್ಕಾರವು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಐಪಿಒ ಮುಂದೂಡುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಇದು ಯುದ್ಧದ ಸಂದರ್ಭ. ಈಗ ಐಪಿಒಗೆ ಹೋಗುವ ಮುನ್ನ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕಿಸುವ ಅಗತ್ಯ ಇದೆ. ಕಂಪನಿಯು ಗರಿಷ್ಠ ಮಟ್ಟದ ಮಾರುಕಟ್ಟೆ ಮೌಲ್ಯ ಪಡೆಯುವ ಅವಕಾಶಕ್ಕಾಗಿ ಕಾದು ನೋಡುಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

ಜಾಗತಿಕ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಐಪಿಒ ಸಮಯದ ಬಗ್ಗೆ ಮರುಪರಿಶೀಲನೆ ನಡೆಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಹ ಸೂಚನೆ ನೀಡಿದ್ದಾರೆ.

ADVERTISEMENT

‘ಯೋಜನೆಗೆ ಅನುಗುಣವಾಗಿಯೇ ನಾವು ಮುಂದುವರಿಯಲು ಬಯಸುತ್ತೇವೆ. ಆದರೆ, ಜಾಗತಿಕ ಪರಿಸ್ಥಿತಿಯನ್ನು ಗಮನಿಸಿದರೆ ಮತ್ತೊಮ್ಮೆ ಪರಿಶೀಲನೆ ನಡೆಸುವ ಅಗತ್ಯ ಇದೆ’ ಎಂದು ಅವರು ‘ಹಿಂದು ಬಿಸಿನೆಸ್‌ ಲೈನ್‌’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಷೇರು ವಿಕ್ರಯದಿಂದ ₹ 78 ಸಾವಿರ ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ. ಇದಕ್ಕೆ ಪೂರಕವಾಗಿ ಎಲ್‌ಐಸಿಯಲ್ಲಿ ಹೊಂದಿರುವ ಷೇರುಗಳಲ್ಲಿ ಶೇಕಡ 5ರಷ್ಟನ್ನು ಮಾರಾಟ ಮಾಡುವ ಮೂಲಕ ₹ 63 ಸಾವಿರ ಕೋಟಿ ಸಂಗ್ರಹಿಸಲು ಮುಂದಾಗಿದೆ.

ಒಂದೊಮ್ಮೆ ಎಲ್‌ಐಸಿ ಐಪಿಒ ಅನ್ನು ಮುಂದಿನ ಹಣಕಾಸು ವರ್ಷಕ್ಕೆ ಮುಂದೂಡಿದರೆ ಕೇಂದ್ರ ಸರ್ಕಾರದ ಷೇರುವಿಕ್ರಯದ ಗುರಿಯು ಭಾರಿ ಪ್ರಮಾಣದಲ್ಲಿ ತಪ್ಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.