ನವದೆಹಲಿ: ಕೇಂದ್ರ ಸರ್ಕಾರವು ಆರು ದಶಕದಷ್ಟು ಹಳೆಯದಾದ ಆದಾಯ ತೆರಿಗೆ ಕಾಯ್ದೆ 1961ರ ಸಮಗ್ರ ಬದಲಾವಣೆಗೆ ನಿರ್ಧರಿಸಿದೆ. ಹಾಗಾಗಿ, ಬಜೆಟ್ ಅಧಿವೇಶನದಲ್ಲಿ ಹೊಸ ಐ.ಟಿ ಮಸೂದೆ ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಕಾಯ್ದೆಯ ಶೇ 60ರಷ್ಟು ಪುಟಗಳನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಕಳೆದ ವರ್ಷದ ಜುಲೈನಲ್ಲಿ ಮಂಡಿಸಿದ್ದ 2024–25ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಯ್ದೆಯ ಪರಾಮರ್ಶೆ ಬಗ್ಗೆ ಪ್ರಸ್ತಾಪಿಸಿದ್ದರು.
‘ಹಾಲಿ ಇರುವ ಕಾಯ್ದೆಯನ್ನು ತಿದ್ದುಪಡಿ ಮಾಡುವುದಿಲ್ಲ. ಕರಡು ಪ್ರತಿಯನ್ನು ಕೇಂದ್ರ ಕಾನೂನು ಸಚಿವಾಲಯವು ಪರಿಶೀಲಿಸಿದೆ. ಬಜೆಟ್ ಅಧಿವೇಶನದ ಎರಡನೇ ಅವಧಿಯಲ್ಲಿ ಮಸೂದೆ ಮಂಡಿಸುವ ಸಾಧ್ಯತೆ ಹೆಚ್ಚಿದೆ’ ಎಂದು ಮೂಲಗಳು ತಿಳಿಸಿವೆ.
ಸಂಸತ್‌ನ ಬಜೆಟ್ ಅಧಿವೇಶನವು ಜನವರಿ 31ರಿಂದ ಏಪ್ರಿಲ್ 4ರ ವರೆಗೆ ನಿಗದಿಯಾಗಿದೆ. ಮೊದಲ ಅವಧಿಯ ಅಧಿವೇಶನವು (ಜನವರಿ 31ರಿಂದ ಫೆಬ್ರುವರಿ 13ರವರೆಗೆ) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಸಭೆ ಮತ್ತು ರಾಜ್ಯಸಭೆಯನ್ನು ಉದ್ದೇಶಿಸಿ ಮಾಡುವ ಜಂಟಿ ಭಾಷಣದೊಟ್ಟಿಗೆ ಆರಂಭವಾಗಲಿದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆಯಾಗಲಿದೆ.
ಬಳಿಕ ಸಂಸತ್‌ನ ಎರಡನೇ ಅವಧಿಯ ಅಧಿವೇಶನವು ಮಾರ್ಚ್ 10ರಿಂದ ಏಪ್ರಿಲ್ 4ರ ವರೆಗೆ ನಿಗದಿಯಾಗಿದೆ.
ಈಗಾಗಲೇ, ಕಾಯ್ದೆ ಬಗ್ಗೆ ಮಧ್ಯಸ್ಥಗಾರರಿಂದ 6,500 ಸಲಹೆಗಳನ್ನು ಸ್ವೀಕರಿಸಲಾಗಿದೆ. 1961ರ ಐ.ಟಿ ಕಾಯ್ದೆಯಲ್ಲಿ 23 ಅಧ್ಯಾಯಗಳಿದ್ದು, 298ಕ್ಕೂ ಹೆಚ್ಚು ಸೆಕ್ಷನ್‌ಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.