ADVERTISEMENT

ಬ್ಯಾಂಕ್ ಠೇವಣಿಗೆ ವಿಮೆ: ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡನೆ ಸಾಧ್ಯತೆ

ಪಿಟಿಐ
Published 16 ಮೇ 2021, 15:06 IST
Last Updated 16 ಮೇ 2021, 15:06 IST
ಬ್ಯಾಂಕ್ ಠೇವಣಿ-ಪ್ರಾತಿನಿಧಿಕ ಚಿತ್ರ
ಬ್ಯಾಂಕ್ ಠೇವಣಿ-ಪ್ರಾತಿನಿಧಿಕ ಚಿತ್ರ   

ನವದೆಹಲಿ: ಬ್ಯಾಂಕ್‌ ದಿವಾಳಿಯಾದ ಸಂದರ್ಭದಲ್ಲಿ, ಠೇವಣಿದಾರರಿಗೆ ಅವರ ಹಣವು ಕಾಲಮಿತಿಯಲ್ಲಿ ಸಿಗುವಂತೆ ಆಗಬೇಕು ಎಂಬ ಉದ್ದೇಶದಿಂದ, ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಕೇಂದ್ರ ಸರ್ಕಾರವು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ.

ಬ್ಯಾಂಕ್‌ ಠೇವಣಿಗಳ ಮೇಲಿನ ವಿಮಾ ಮೊತ್ತವನ್ನು ಕೇಂದ್ರ ಸರ್ಕಾರವು ಕಳೆದ ವರ್ಷ ₹ 5 ಲಕ್ಷಕ್ಕೆ ಹೆಚ್ಚಿಸಿದೆ. ಅದಕ್ಕೂ ಮೊದಲು ₹ 1 ಲಕ್ಷದವರೆಗಿನ ಠೇವಣಿಗೆಗಳಿಗೆ ಮಾತ್ರ ವಿಮೆ ಸೌಲಭ್ಯ ಇತ್ತು. ‘ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ ಕಾಯ್ದೆ – 1961’ಕ್ಕೆ ತಿದ್ದುಪಡಿ ತರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಪ್ರಕಟಿಸಿದ್ದರು. ತಿದ್ದುಪಡಿ ಮಸೂದೆಯು ಬಹುತೇಕ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.

ತಿದ್ದುಪಡಿ ಮಸೂದೆಯನ್ನು ಕೇಂದ್ರ ಸಚಿವ ಸಂಪುಟವು ಪರಿಶೀಲಿಸಲಿದೆ. ಅದಾದ ನಂತರ, ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು. ಈ ತಿದ್ದುಪಡಿಯು ಕಾಯ್ದೆಯ ಭಾಗವಾದ ನಂತರ, ಪಿಎಂಸಿ ಬ್ಯಾಂಕ್‌ನಂತಹ ಸಹಕಾರಿ ಬ್ಯಾಂಕ್‌ಗಳಲ್ಲಿ ಹಣ ಇರಿಸಿರುವ ಸಹಸ್ರಾರು ಜನರಿಗೆ ತಕ್ಷಣಕ್ಕೆ ಪರಿಹಾರ ಸಿಗುವ ನಿರೀಕ್ಷೆ ಇದೆ.

ADVERTISEMENT

ಈಗಿರುವ ನಿಯಮಗಳ ಅನ್ವಯ, ಬ್ಯಾಂಕ್‌ನ ನೋಂದಣಿ ರದ್ದಾಗಿ ಅದರ ಆಸ್ತಿ ಹರಾಜು ಹಾಕಬೇಕಾದ ಸಂದರ್ಭ ಬಂದಾಗ ₹ 5 ಲಕ್ಷದವರೆಗಿನ ವಿಮೆಯ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ವಿಮಾ ಸೌಲಭ್ಯವನ್ನು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಮಾಲೀಕತ್ವದ ಡಿಐಸಿಜಿಸಿ ನೀಡುತ್ತದೆ.

‘ಡಿಐಸಿಜಿಸಿ ಕಾಯ್ದೆಗೆ ತಿದ್ದುಪಡಿಯನ್ನು ಹಾಲಿ ಅಧಿವೇಶನದಲ್ಲಿಯೇ ತರಲಿದ್ದೇವೆ. ಠೇವಣಿದಾರರಿಗೆ ತಮ್ಮ ಹಣವು ಸುಲಭವಾಗಿ, ಕಾಲಮಿತಿಯಲ್ಲಿ ಸಿಗುವಂತೆ ಆಗುತ್ತದೆ’ ಎಂದು ನಿರ್ಮಲಾ ಅವರು ಹೇಳಿದ್ದರು. ಕೋವಿಡ್‌ ಕಾರಣದಿಂದಾಗಿ ಬಜೆಟ್ ಅಧಿವೇಶನವು ಮೊಟಕಾಯಿತು. ಹೀಗಾಗಿ, ತಿದ್ದುಪಡಿ ಮಸೂದೆಯನ್ನು ಆಗ ಮಂಡಿಸಲು ಆಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.