ADVERTISEMENT

ಚಿನ್ನಕ್ಕೆ ಹಾಲ್‌ಮಾರ್ಕ್‌ ಅಧಿಸೂಚನೆ ಪ್ರಕಟ

ಪಿಟಿಐ
Published 17 ಜನವರಿ 2020, 19:43 IST
Last Updated 17 ಜನವರಿ 2020, 19:43 IST
ಚಿನ್ನಾಭರಣ
ಚಿನ್ನಾಭರಣ   

ನವದೆಹಲಿ : ಚಿನ್ನದ ಆಭರಣ ಮತ್ತು ಕಲಾಕೃತಿಗಳಿಗೆ ಮುಂದಿನ ವರ್ಷದಿಂದ ಹಾಲ್‌ಮಾರ್ಕ್‌ ಕಡ್ಡಾಯ ಮಾಡುವ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಅಧಿಸೂಚನೆ ಪ್ರಕಾರ, ನೋಂದಾಯಿತ ವರ್ತಕರು ಮಾತ್ರ ಪ್ರಮಾಣಪತ್ರ ಪಡೆದ ಮಾರಾಟ ಮಳಿಗೆಗಳಲ್ಲಿ ಹಾಲ್‌ಮಾರ್ಕ್‌ ಚಿನ್ನಾಭರಣಗಳನ್ನು ಮಾರಾಟ ಮಾಡಬಹುದಾಗಿದೆ.

ಚಿನ್ನದ ಶುದ್ಧತೆಯ ಪ್ರಮಾಣ ಪತ್ರವಾಗಿರುವ ಹಾಲ್‌ಮಾರ್ಕ್‌ ಹಾಕುವುದು ಸದ್ಯಕ್ಕೆ ಐಚ್ಛಿಕವಾಗಿದೆ. ಭಾರತೀಯ ಮಾನದಂಡ ಮಂಡಳಿಯು (ಬಿಐಎಸ್), 2000ನೇ ಇಸ್ವಿಯ ಏಪ್ರಿಲ್‌ನಿಂದಲೇ ಇದನ್ನು ಜಾರಿಗೆ ತಂದಿದೆ. ವಿಶ್ವ ಚಿನ್ನ ಮಂಡಳಿಯ ಭಾರತದ ಘಟಕವು, ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದೆ. ನಿಯಮ ಜಾರಿಗೆ ಒಂದು ವರ್ಷದ ಕಾಲಾವಧಿ ಇರುವುದು ಉದ್ದಿಮೆಗೆ ಅನುಕೂಲಕರವಾಗಿದೆ ಎಂದು ತಿಳಿಸಿದೆ.

ADVERTISEMENT

‘ಗ್ರಾಹಕರ ಅದರಲ್ಲೂ ತಮ್ಮ ಉಳಿತಾಯದ ಹಣವನ್ನು ಚಿನ್ನ ಖರೀದಿಗೆ ಬಳಸುವ ಮಹಿಳೆಯರ ಹಿತಾಸಕ್ತಿ ರಕ್ಷಿಸಲು ಇದೊಂದು ಪ್ರಗತಿಪರ ನಿರ್ಧಾರವಾಗಿದೆ’ ಎಂದು ವಿಶ್ವ ಚಿನ್ನ ಮಂಡಳಿಯ ಭಾರತದ ವ್ಯವಸ್ಥಾಪಕ ನಿರ್ದೇಶಕಸೋಮಸುಂದರಂ ಪಿಆರ್‌ ಪ್ರತಿಕ್ರಿಯಿಸಿದ್ದಾರೆ.

‘ಈ ಸುಧಾರಣಾ ಕ್ರಮಕ್ಕೆ ಬೆನ್ನೆಲುಬು ಆಗಿ ಕಠಿಣ ಸ್ವರೂಪದ ಜಾರಿ ವ್ಯವಸ್ಥೆಯು ದೇಶಿ ಚಿನ್ನಾಭರಣಗಳ ವಹಿವಾಟು ಕುರಿತ ಪರಿಕಲ್ಪನೆಯನ್ನೇ ಬದಲಿಸಲಿದೆ. ಚಿನ್ನಾಭರಣ ತಯಾರಿಕೆಯ ಕೌಶಲ್ಯಕ್ಕೆ ಮಾರುಕಟ್ಟೆ ವಿಸ್ತರಣೆಗೂ ಅವಕಾಶ ದೊರೆಯಲಿದೆ’ ಎಂದು ಹೇಳಿದ್ದಾರೆ.

**

ಅಧಿಸೂಚನೆಯ ಮುಖ್ಯಾಂಶಗಳು

* ಈ ಮೊದಲಿನ 10 ಗ್ರೇಡ್‌ ಬದಲಿಗೆ 3 ಗ್ರೇಡ್‌ಗಳ (14,18,22 ಕ್ಯಾರಟ್‌) ಆಭರಣ, ಕಲಾಕೃತಿಗಳ ಮಾರಾಟ

* ರಫ್ತು ಮಾಡುವ ಚಿನ್ನಕ್ಕೆ ಹಾಲ್‌ಮಾರ್ಕ್‌ ಕಡ್ಡಾಯ ಅನ್ವಯವಾಗದು

* ವೈದ್ಯಕೀಯ, ವೈಜ್ಞಾನಿಕ ಮತ್ತು ಕೈಗಾರಿಕಾ ಉದ್ದೇಶಕ್ಕೆ ಬಳಸುವ ಚಿನ್ನಕ್ಕೆ ವಿನಾಯ್ತಿ

* ವಿನ್ಯಾಸ ಪೂರ್ಣಗೊಳ್ಳದ ಆಭರಣಗಳಿಗೆ ಅನ್ವಯಗೊಳ್ಳದು

* ಹಾಲ್‌ಮಾರ್ಕ್‌ ಹಾಕಿದ ಆಭರಣಗಳಲ್ಲಿ ಚಿನ್ನದ ಕ್ಯಾರಟ್‌ನ ಶುದ್ಧತೆ ಮತ್ತು ಗುಣಮಟ್ಟ ಸೂಚಿಸುವ ಬಿಐಎಸ್‌ ಗುರುತು, ಹಾಲ್‌ಮಾರ್ಕ್‌ ಕೇಂದ್ರಗಳ ಗುರುತು ಅಥವಾ ಸಂಖ್ಯೆ, ವರ್ತಕರ ಗುರುತು / ಸಂಖ್ಯೆ ಇರಲಿದೆ

***

ನಿಯಮ ಜಾರಿಗೆ ಒಂದು ವರ್ಷದ ಕಾಲಾವಧಿ ಇರುವುದರಿಂದ ಹಾಲ್‌ಮಾರ್ಕ್‌ರಹಿತ ಆಭರಣ ಮಾರಾಟ ಮಾಡಲು ಸಮಸ್ಯೆಯಾಗಲಾರದು

-ಸೋಮಸುಂದರಂ ಪಿಆರ್‌

ವಿಶ್ವ ಚಿನ್ನ ಮಂಡಳಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.