ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕರ ಸೇವಾ ಅವಧಿಯನ್ನು ಗರಿಷ್ಠ 10 ವರ್ಷಗಳವರೆಗೆ ಹೆಚ್ಚಿಸಲಾಗಿದೆ.
ಕೇಂದ್ರ ಸರ್ಕಾರವು ನವೆಂಬರ್ 17ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ನೇಮಕಾತಿ ಅವಧಿಯನ್ನು 5 ವರ್ಷಗಳಿಂದ 10 ವರ್ಷಗಳವರೆಗೆ ವಿಸ್ತರಿಸಲಾಗಿದೆ. ಇದು 60 ವರ್ಷಗಳ ನಿವೃತ್ತಿ ವಯಸ್ಸಿನ ಮಿತಿಗೆ ಒಳಪಟ್ಟಿದೆ.
ಈ ಮೊದಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಸಿಇಒ ಅವಧಿಯು ಗರಿಷ್ಠ 5 ವರ್ಷ ಅಥವಾ 60 ವರ್ಷ ವಯಸ್ಸು; ಇವುಗಳಲ್ಲಿ ಯಾವುದು ಮೊದಲೋ ಅದು ಅನ್ವಯವಾಗುವಂತೆ ಇತ್ತು.
ಎಲ್ಲ ಕೇಂದ್ರೋದ್ಯಮಗಳ ಪೂರ್ಣಾವಧಿ ನಿರ್ದೇಶಕರಿಗೂ ಇದು ಅನ್ವಯ ಆಗುತ್ತದೆ. ಉತ್ತಮ ಪ್ರತಿಭೆಗಳನ್ನು ಬ್ಯಾಂಕಿಂಗ್ ವಲಯದಲ್ಲಿ ಉಳಿಸಿಕೊಳ್ಳಲು ಈ ನಿರ್ಧಾರವು ಸರ್ಕಾರಕ್ಕೆ ನೆರವಾಗಲಿದೆ.
ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಪೂರ್ಣಾವಧಿ ನಿರ್ದೇಶಕರು ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಆರಂಭಿಕವಾಗಿ ಐದು ವರ್ಷಗಳನ್ನು ಮೀರದಂತೆ ಅಧಿಕಾರದಲ್ಲಿ ಇರಬಹುದು. ಆ ಬಳಿಕ ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್ನ ಸಲಹೆಯ ಮೇರೆಗೆ ಮತ್ತೆ ಗರಿಷ್ಠ ಐದು ವರ್ಷಗಳ ಅವಧಿಗೆ ಮರು ನೇಮಕ ಮಾಡಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
45ರಿಂದ 50 ವರ್ಷ ವಯಸ್ಸಿನಲ್ಲಿ ಇರುವಾಗಲೇಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಆಡಳಿತ ಮಂಡಳಿಯಲ್ಲಿ ಪೂರ್ಣಾವಧಿ ನಿರ್ದೇಶಕರಾದವರಿಗೆ ಈ ತಿದ್ದುಪಡಿಯಿಂದ ಹೆಚ್ಚಿನ ಪ್ರಯೋಜನ ಸಿಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.