ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಸಿ–ಹೆವಿ ಮೊಲಾಸಿಸ್‌ನಿಂದ (ಕಾಕಂಬಿ) ಉತ್ಪಾದಿಸುವ ಎಥೆನಾಲ್ ದರವನ್ನು ಶೇ 3ರಷ್ಟು ಹೆಚ್ಚಿಸಲು ಒಪ್ಪಿಗೆ ನೀಡಿದೆ. ಒಟ್ಟಾರೆ ಲೀಟರ್‌ಗೆ ₹1.69 ಹೆಚ್ಚಳವಾಗಲಿದೆ.
ಪ್ರತಿ ಲೀಟರ್ ಬೆಲೆ ₹57.97 ಆಗಲಿದ್ದು, 2024–25ನೇ ಪೂರೈಕೆ ವರ್ಷಕ್ಕೆ (ನವೆಂಬರ್–ಅಕ್ಟೋಬರ್) ಈ ಪರಿಷ್ಕೃತ ದರ ಅನ್ವಯವಾಗಲಿದೆ.
ಪ್ರಸ್ತುತ ಬಿ–ಹೆವಿ ಮೊಲಾಸಿಸ್‌ನಿಂದ ತಯಾರಿಸುವ ಎಥೆನಾಲ್ ದರ ಲೀಟರ್‌ಗೆ ₹60.73 ಇದೆ. ಕಬ್ಬಿನ ಹಾಲು, ಸಕ್ಕರೆ ಹಾಗೂ ಸಕ್ಕರೆ ಪಾಕ ಬಳಸಿ ತಯಾರಿಸುವ ಎಥೆನಾಲ್ ದರವು ಲೀಟರ್‌ಗೆ ₹65.61 ಇದೆ. ಸರ್ಕಾರವು ಈ ಬೆಲೆಯನ್ನು ಪರಿಷ್ಕರಿಸಿಲ್ಲ.
2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್‌ನೊಂದಿಗೆ ಶೇ 20ರಷ್ಟು ಎಥೆನಾಲ್ ಮಿಶ್ರಣ ಯೋಜನೆಗೆ ಚಾಲನೆ ನೀಡಿದ್ದರು. ಸರ್ಕಾರವು 2030ರೊಳಗೆ ಈ ಗುರಿ ಸಾಧನೆಗೆ ನಿರ್ಧರಿಸಿತ್ತು. ಆದರೆ, 2025–26ನೇ ಆರ್ಥಿಕ ವರ್ಷದಲ್ಲಿಯೇ ಈ ಗುರಿ ಸಾಧಿಸಲು ಮುಂದಾಗಿದೆ.
ಎಥೆನಾಲ್ ಮಿಶ್ರಣದ ಗುರಿ ಈಡೇರಿಕೆಗೆ ಪೂರಕವಾಗಿ ಈ ದರ ಪರಿಷ್ಕರಣೆ ಮಾಡಿದೆ. ಅಲ್ಲದೆ, ಕಬ್ಬಿನ ಉಪ ಉತ್ಪನ್ನಗಳಿಂದ ಎಥೆನಾಲ್ ತಯಾರಿಕೆ ಹೆಚ್ಚಳಕ್ಕೆ ಅನುಕೂಲ ಕಲ್ಪಿಸುವ ಆಶಯವೂ ಇದರ ಹಿಂದಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ಸರ್ಕಾರದ ಈ ನಿರ್ಧಾರದಿಂದ ಕಬ್ಬು ಬೆಳೆಗಾರರು ಹಾಗೂ ಪರಿಸರಕ್ಕೂ ಅನುಕೂಲವಾಗಲಿದೆ ಎಂದು ಹೇಳಿದರು.
ಸರ್ಕಾರವು ದರ ಏರಿಕೆ ಮಾಡಿರುವುದರಿಂದ ಸರ್ಕಾರಿ ಸ್ವಾಮ್ಯದ ತೈಲ ಉತ್ಪಾದನಾ ಕಂಪನಿಗಳು 2024–25ನೇ ಪೂರೈಕೆ ವರ್ಷಕ್ಕೆ ಸಂಬಂಧಿಸಿದಂತೆ ಎಥೆನಾಲ್ ಖರೀದಿಸುವ ದರವನ್ನು ಪರಿಷ್ಕರಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
‘ಬಿ–ಹೆವಿ ಮೊಲಾಸಿಸ್ ಹಾಗೂ ಸಕ್ಕರೆ ಪಾಕದಿಂದ ಉತ್ಪಾದಿಸುವ ಎಥೆನಾಲ್ ಬೆಲೆ ಏರಿಕೆ ಮಾಡಿಲ್ಲ. ಆ ಮೂಲಕ ಸಕ್ಕರೆ ಉತ್ಪಾದನೆಯ ಹೆಚ್ಚಳಕ್ಕೆ ಸರ್ಕಾರವು ಮುನ್ನೆಚ್ಚರಿಕೆಯ ಹೆಜ್ಜೆ ಇಟ್ಟಿದೆ’ ಎಂದು ಅಖಿಲ ಭಾರತ ಸಕ್ಕರೆ ವ್ಯಾಪಾರಿಗಳ ಒಕ್ಕೂಟದ (ಎಐಎಸ್‌ಟಿಎ) ಅಧ್ಯಕ್ಷ ಪ್ರಫುಲ್ ವಿಠಲನಿ ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 2013–14ರಲ್ಲಿ ಪೆಟ್ರೋಲ್‌ನೊಂದಿಗೆ 38 ಕೋಟಿ ಲೀಟರ್‌ನಷ್ಟು ಎಥೆನಾಲ್ ಮಿಶ್ರಣ ಮಾಡಿದ್ದವು. 2023–24ರಲ್ಲಿ ಈ ಪ್ರಮಾಣವು 707 ಕೋಟಿ ಲೀಟರ್‌ಗೆ ಮುಟ್ಟಿದೆ. ಒಟ್ಟಾರೆ ಶೇ 14.60ರಷ್ಟು ಸಾಧನೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯಡಿ ಕಳೆದ ವರ್ಷದ ಡಿಸೆಂಬರ್ 1ರವರೆಗೆ ₹1.13 ಲಕ್ಷ ಕೋಟಿಯಷ್ಟು ವಿದೇಶಿ ವಿನಿಮಯ ಮೀಸಲು ಉಳಿತಾಯವಾಗಿದೆ. 193 ಲಕ್ಷ ಟನ್‌ನಷ್ಟು ಕಚ್ಚಾ ತೈಲದ ಬದಲಿಗೆ ಎಥೆನಾಲ್ ಬಳಸಲಾಗಿದೆ ಎಂದು ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.