ADVERTISEMENT

ಮೊರಟೋರಿಯಂ ವಿಸ್ತರಣೆಗೆ ಎಸ್‌ಬಿಐ ಅವಕಾಶ

ಗೃಹ, ಶಿಕ್ಷಣ, ವಾಹನ ಸಾಲ ಪಡೆದವರಿಗೆ ನೆರವು

ಪಿಟಿಐ
Published 22 ಸೆಪ್ಟೆಂಬರ್ 2020, 19:30 IST
Last Updated 22 ಸೆಪ್ಟೆಂಬರ್ 2020, 19:30 IST
   

ಬೆಂಗಳೂರು: ಕೋವಿಡ್–19 ಸಾಂಕ್ರಾಮಿಕದ ಪರಿಣಾಮವಾಗಿ ಉದ್ಯೋಗ ಕಳೆದುಕೊಂಡ, ವೇತನ ಕಡಿತ ಅನುಭವಿಸುತ್ತಿರುವ, ಆದಾಯದ ಮೂಲ ಇಲ್ಲವಾಗಿಸಿಕೊಂಡ ವ್ಯಕ್ತಿಗಳಿಗೆ ಸಾಲ ಮರುಹೊಂದಾಣಿಕೆ ಮಾಡಿಕೊಳ್ಳುವ ಅವಕಾಶವನ್ನು ಭಾರತೀಯ ಸ್ಟೇಟ್‌ ಬ್ಯಾಂಕ್ (ಎಸ್‌ಬಿಐ) ಕಲ್ಪಿಸಿದೆ. ಈ ಸೌಲಭ್ಯ ಪಡೆದುಕೊಳ್ಳಲು ಬಯಸುವವರು ಡಿಸೆಂಬರ್ 24ಕ್ಕೆ ಮೊದಲು ಅರ್ಜಿ ಸಲ್ಲಿಸಬೇಕು.

ಗರಿಷ್ಠ 24 ತಿಂಗಳುಗಳ ಅವಧಿಗೆ ಸಾಲದ ಕಂತುಗಳ ಪಾವತಿಗೆ ವಿನಾಯಿತಿ (ಮೊರಟೋರಿಯಂ), ಸಾಲದ ಅವಧಿಯನ್ನು ಗರಿಷ್ಠ 24 ತಿಂಗಳುಗಳಿಗೆ ವಿಸ್ತರಿಸಿಕೊಳ್ಳುವ ಸೌಲಭ್ಯವನ್ನು ಪಡೆಯಬಹುದು ಎಂದು ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ವಿವರದಲ್ಲಿ ಹೇಳಿದೆ. ಮೊರಟೋರಿಯಂ ಅವಧಿಯಲ್ಲಿ ಸಾಲದ ಮೊತ್ತಕ್ಕೆ ಬಡ್ಡಿ ವಿನಾಯಿತಿ ಇರುವುದಿಲ್ಲ.

ಮೊರಟೋರಿಯಂ ಅವಧಿಯನ್ನು ಎರಡು ವರ್ಷಗಳ ಅವಧಿಗೆ ವಿಸ್ತರಿಸಬಹುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸುಪ್ರೀಂ ಕೋರ್ಟ್‌ಗೆ ಈಚೆಗೆ ತಿಳಿಸಿತ್ತು. ಸಾಲವನ್ನು ಒಂದು ಬಾರಿಗೆ ಮರುಹೊಂದಾಣಿಕೆ ಮಾಡಿಕೊಳ್ಳಲು ಆರ್‌ಬಿಐಅವಕಾಶ ಕಲ್ಪಿಸಿತ್ತು. ಈ ಮೊದಲು ಘೋಷಿಸಿದ್ದ ಮೊರಟೋರಿಯಂ ಅವಧಿಯು ಆಗಸ್ಟ್‌ 31ಕ್ಕೆ ಕೊನೆಗೊಂಡಿದೆ.

ADVERTISEMENT

ಯಾರು ಅರ್ಹರು?: ಈ ವರ್ಷದ ಫೆಬ್ರುವರಿಯ ವೇತನ/ಆದಾಯಕ್ಕೆ ಹೋಲಿಸಿದರೆ ಆಗಸ್ಟ್‌ನಲ್ಲಿನ ವೇತನ/ಆದಾಯದಲ್ಲಿ ಕಡಿತ ಆಗಿದ್ದರೆ, ಲಾಕ್‌ಡೌನ್‌ ಅವಧಿಯಲ್ಲಿ ವೇತನ ಕಡಿಮೆ ಆಗಿದ್ದರೆ ಅಥವಾ ವೇತನ ಸಿಕ್ಕಿಲ್ಲದಿದ್ದರೆ, ನೌಕರಿ ಕಳೆದುಕೊಂಡಿದ್ದರೆ ಅಥವಾ ವಾಣಿಜ್ಯ ವಹಿವಾಟಿನ ಬಾಗಿಲು ಮುಚ್ಚಬೇಕಾಗಿ ಬಂದಿದ್ದರೆ, ಸ್ವಉದ್ಯೋಗಿಗಳು ನಡೆಸುವ ಘಟಕಗಳು ಲಾಕ್‌ಡೌನ್‌ ಅವಧಿಯಲ್ಲಿ ಬಾಗಿಲು ಮುಚ್ಚಿದ್ದರೆ ಅಥವಾ ಅವುಗಳಲ್ಲಿನ ಚಟುವಟಿಕೆ ಕಡಿಮೆ ಆಗಿದ್ದರೆ ಅಂಥವರು ಈ ಸೌಲಭ್ಯ ಪಡೆದುಕೊಳ್ಳಬಹುದು.

ಯಾವ ಸಾಲಕ್ಕೆ ಮೊರಟೋರಿಯಂ?: ಗೃಹ ಮತ್ತು ಇತರೆ ಸಂಬಂಧಿತ ಸಾಲಗಳು, ಶೈಕ್ಷಣಿಕ ಸಾಲ, ವಾಣಿಜ್ಯ ಬಳಕೆಗೆ ಅಲ್ಲದ ವಾಹನ ಸಾಲ, ವೈಯಕ್ತಿಕ ಸಾಲಕ್ಕೆ ಈ ಸೌಲಭ್ಯ ಪಡೆಯಬಹುದು. ಸಾಲ ಪಡೆದಿದ್ದು ಮಾರ್ಚ್‌ 1ರ ನಂತರ ಆಗಿದ್ದರೆ ಅಂತಹ ಸಾಲಕ್ಕೆ ಈ ಸೌಲಭ್ಯ ಸಿಗುವುದಿಲ್ಲ.ಪಡೆದಿರುವ ಸಾಲವು ಮಾರ್ಚ್‌ 1ರವರೆಗಿನ ಅವಧಿಯಲ್ಲಿ ಸುಸ್ತಿ ಆಗಿರಬಾರದು.

ಅರ್ಜಿ ಸಲ್ಲಿಸುವುದು ಹೇಗೆ?: ಎಸ್‌ಬಿಐ ವೆಬ್‌ಸೈಟ್‌ಗೆ(www.sbi.co.in) ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಸಾಲದ ಖಾತೆ ಇರುವ ಬ್ಯಾಂಕ್‌ ಶಾಖೆಗೆ ಭೇಟಿ ನೀಡಿಯೂ ಅರ್ಜಿ ಸಲ್ಲಿಸಬಹುದು.

ಕಂತಿನ ಮೊತ್ತ ಬದಲಾಗುತ್ತದೆ: ಮೊರಟೋರಿಯಂ ಸೌಲಭ್ಯ ಪಡೆಯುವವರ ಸಾಲದ ಕಂತುಗಳ ಮೊತ್ತ ಬದಲಾಗಬಹುದು ಎಂದು ಎಸ್‌ಬಿಐ ಹೇಳಿದೆ. ಸಾಲ ಪಡೆದಿರುವ ವ್ಯಕ್ತಿ ಎಷ್ಟು ಅವಧಿಗೆ ಮೊರಟೋರಿಯಂ ಸೌಲಭ್ಯ ಪಡೆಯುತ್ತಾನೋ ಅಷ್ಟರಮಟ್ಟಿಗೆ ಸಾಲದ ಮೂಲ ಅವಧಿಯೂ ವಿಸ್ತರಿಸಿಕೊಳ್ಳುತ್ತದೆ. ಮೊರಟೋರಿಯಂ ನಂತರ ಪಾವತಿಸಬೇಕಾಗುವ ಕಂತಿನ ಮೊತ್ತ ಎಷ್ಟು ಎಂಬುದನ್ನು ಲೆಕ್ಕ ಹಾಕಿ, ತಿಳಿಸಲಾಗುತ್ತದೆ. ಸಾಲದ ಉಳಿಕೆ ಅವಧಿಗೆ ಹೆಚ್ಚುವರಿಯಾಗಿ ವಾರ್ಷಿಕ ಶೇಕಡ 0.35ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.