ADVERTISEMENT

ಆಸ್ತಿ ನಗದೀಕರಣಕ್ಕೆ 3,400 ಎಕರೆ ಗುರುತು

ಪಿಟಿಐ
Published 31 ಜನವರಿ 2022, 16:35 IST
Last Updated 31 ಜನವರಿ 2022, 16:35 IST
 ಆರ್ಥಿಕ ಸಮೀಕ್ಷಾ ವರದಿ
ಆರ್ಥಿಕ ಸಮೀಕ್ಷಾ ವರದಿ   

ನವದೆಹಲಿ: ಕೇಂದ್ರ ಸರ್ಕಾರವು ರಾಷ್ಟ್ರೀಯ ಜಮೀನು ನಗದೀಕರಣ ನಿಗಮವನ್ನು (ಎನ್‌ಎಲ್‌ಎಂಸಿ) ಸ್ಥಾಪಿಸಿದ್ದು, ಇದರ ಮೂಲಕ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಜಮೀನು ಮತ್ತು ಪ್ರಮುಖವಲ್ಲದ ಆಸ್ತಿಗಳ ನಗದೀಕರಣ ಪ್ರಕ್ರಿಯೆಗೆ ವೇಗ ನೀಡಲಿದೆ. ಈ ಅಂಶವು ಸೋಮವಾರ ಸಂಸತ್ತಿನಲ್ಲಿ ಮಂಡನೆಯಾದ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಇದೆ.

ಕೇಂದ್ರೋದ್ಯಮಗಳು ಇದುವರೆಗೆ ಒಟ್ಟು 3,400 ಎಕರೆ ಜಮೀನನ್ನು ಮತ್ತು ಇತರ ಕೆಲವು ಪ್ರಮುಖವಲ್ಲದ ಆಸ್ತಿಗಳನ್ನು ನಗದೀಕರಣಕ್ಕಾಗಿ ಗುರುತಿಸಿವೆ. ಎಂಟಿಎನ್‌ಎಲ್‌, ಬಿಎಸ್‌ಎನ್‌ಎಲ್, ಬಿಪಿಸಿಎಲ್, ಬಿಇಎಂಎಲ್, ಎಚ್‌ಎಂಟಿ, ಇನ್‌ಸ್ಟ್ರುಮೆಂಟೇಷನ್ ಲಿಮಿಟೆಡ್ ಕಂಪನಿಗಳ ಆಸ್ತಿಗಳು ಇದರಲ್ಲಿ ಸೇರಿವೆ.

ಪ್ರಮುಖವಲ್ಲದ ಆಸ್ತಿಗಳ ನಗದೀಕರಣಕ್ಕೆ ಬೇಕಿರುವ ಕೌಶಲವು ಕೇಂದ್ರ ಸರ್ಕಾರದ ಬಳಿ ಅಗತ್ಯ ಪ್ರಮಾಣದಲ್ಲಿ ಇಲ್ಲವಾಗಿದ್ದ ಕಾರಣ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021–22ರ ಬಜೆಟ್‌ನಲ್ಲಿ, ಆಸ್ತಿ ನಗದೀಕರಣಕ್ಕೆ ವಿಶೇಷ ವ್ಯವಸ್ಥೆಯೊಂದನ್ನು ಹುಟ್ಟು ಹಾಕುವ ಪ್ರಸ್ತಾಪ ಮಾಡಿದ್ದರು.

ADVERTISEMENT

‘ಬಜೆಟ್‌ನಲ್ಲಿನ ಘೋಷಣೆಗೆ ಅನುಗುಣವಾಗಿ, ಎನ್‌ಎಲ್‌ಎಂಸಿ ಸ್ಥಾಪಿಸಲಾಗುತ್ತಿದೆ. ಇದರ ಪೂರ್ಣ ಮಾಲೀಕತ್ವವು ಕೇಂದ್ರ ಸರ್ಕಾರದ್ದಾಗಿರಲಿದೆ’ ಎಂದು ಸಮೀಕ್ಷೆಯ ವರದಿ ಹೇಳಿದೆ. 2021–22ರಿಂದ 2024–25ರ ನಡುವಿನ ಅವಧಿಯಲ್ಲಿ ನಗದೀಕರಣ ಮಾಡಿಕೊಳ್ಳಬಹುದಾದ ಸಾಮರ್ಥ್ಯವು ಒಟ್ಟು ₹ 6 ಲಕ್ಷ ಕೋಟಿ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಮೊತ್ತದಲ್ಲಿ ಶೇ 83ರಷ್ಟು ಪಾಲು ರಸ್ತೆಗಳು, ರೈಲ್ವೆ, ಇಂಧನ, ತೈಲ ಮತ್ತು ಅನಿಲ ಕೊಳವೆ, ದೂರಸಂಪರ್ಕ ವಲಯಗಳದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.