ಮುಂಬೈ: ‘ಶೀಘ್ರವೇ, ಕೇಂದ್ರ ಸರ್ಕಾರವು ಸಕ್ಕರೆ ಮೇಲಿನ ಕನಿಷ್ಠ ಮಾರಾಟ ದರವನ್ನು (ಎಂಎಸ್‌ಪಿ) ಹೆಚ್ಚಿಸಲಿದೆ’ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ತಿಳಿಸಿದ್ದಾರೆ.
ಅಖಿಲ ಭಾರತೀಯ ಸಕ್ಕರೆ ವ್ಯಾಪಾರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದರ ಹೆಚ್ಚಳ ಕುರಿತು ಚರ್ಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಇದು ಕಾರ್ಯಗತಗೊಳ್ಳಲಿದೆ’ ಎಂದು ಹೇಳಿದರು.
2019ರಲ್ಲಿ ಪ್ರತಿ ಕೆ.ಜಿಗೆ ಮಾರಾಟ ದರವನ್ನು ₹31ಕ್ಕೆ ಹೆಚ್ಚಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ದರ ಏರಿಕೆ ಮಾಡಿಲ್ಲ. ಆದರೆ, ಕೇಂದ್ರ ಸರ್ಕಾರವು ರೈತರಿಗೆ ಅನುಕೂಲ ಕಲ್ಪಿಸಲು ಕಬ್ಬಿಗೆ ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರವನ್ನು (ಎಫ್‌ಆರ್‌ಪಿ) ಹೆಚ್ಚಿಸಿದೆ ಎಂದರು.
ಸಕ್ಕರೆ ಉತ್ಪಾದನಾ ವೆಚ್ಚವು ಏರಿಕೆಯಾಗುತ್ತಿದೆ. ಇದರಿಂದ ಕಾರ್ಖಾನೆಗಳ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಹಾಗಾಗಿ, ಪ್ರತಿ ಕೆ.ಜಿಗೆ ₹42 ಎಂಎಸ್‍ಪಿ ಏರಿಕೆ ಮಾಡಬೇಕು ಎಂದು ಸಹಕಾರಿ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಸಿಎಸ್‌ಎಫ್) ಒತ್ತಾಯಿಸಿದೆ.
ಕಬ್ಬು ನಾಟಿ ಎಷ್ಟು?: 2024–25ನೇ ಮಾರುಕಟ್ಟೆ ಋತುವಿನಲ್ಲಿ (ಅಕ್ಟೋಬರ್–ಸೆಪ್ಟೆಂಬರ್) ಸಕ್ಕರೆ ಉತ್ಪಾದನೆ ಹೆಚ್ಚಳವಾಗುವ ನಿರೀಕ್ಷೆಯಿದೆ. ಕಳೆದ ಮಾರುಕಟ್ಟೆ ವರ್ಷದಲ್ಲಿ ಇದೇ ಅವಧಿಯಲ್ಲಿ 57 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ನಾಟಿ ಮಾಡಲಾಗಿತ್ತು. ಈ ಬಾರಿ ಇಲ್ಲಿಯವರೆಗೆ 58 ಲಕ್ಷ ಹೆಕ್ಟೇರ್‌ನಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದೆ ಎಂದು ಚೋಪ್ರಾ ತಿಳಿಸಿದ್ದಾರೆ.
ದೇಶದಲ್ಲಿ 2022–23ರ ಮಾರುಕಟ್ಟೆ ವರ್ಷದಲ್ಲಿ 32.8 ದಶಲಕ್ಷ ಟನ್‌ನಷ್ಟು ಸಕ್ಕರೆ ಉತ್ಪಾದನೆಯಾಗಿತ್ತು. 2023–24ರಲ್ಲಿ 32 ದಶಲಕ್ಷ ಟನ್ ಉತ್ಪಾದನೆಯಾಗಿದೆ. ದೇಶೀಯ ಮಾರುಕಟ್ಟೆಯ ಬೇಡಿಕೆಯು 27 ದಶಲಕ್ಷ ಟನ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.