ADVERTISEMENT

ಎನ್‌ಪಿಎಸ್ ಸುಧಾರಣೆಗೆ ಸಮಿತಿ

ಪಿಟಿಐ
Published 24 ಮಾರ್ಚ್ 2023, 14:20 IST
Last Updated 24 ಮಾರ್ಚ್ 2023, 14:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹೊಸ ಪಿಂಚಣಿ ವ್ಯವಸ್ಥೆಯನ್ನು (ಎನ್‌ಪಿಎಸ್) ಸುಧಾರಿಸಲು ಕೇಂದ್ರ ಹಣಕಾಸು ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಕೇಂದ್ರ ಸರ್ಕಾರವು ಶುಕ್ರವಾರ ಹೇಳಿದೆ.

ಜನಸಾಮಾನ್ಯರ ಹಿತ ಕಾಪಾಡಾಲು ಹಣಕಾಸಿನ ವಿಚಾರದಲ್ಲಿ ವಿವೇಕವನ್ನು ಕಾಯ್ದುಕೊಂಡು, ನೌಕರರ ಕಳವಳಗಳ ಕಡೆಗೂ ಗಮನ ನೀಡುವ ಕೆಲಸವನ್ನು ಸಮಿತಿಯು ಮಾಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

‘ಹಣಕಾಸು ಮಸೂದೆ 2023’ಅನ್ನು ಅನುಮೋದನೆಗೆ ಲೋಕಸಭೆಯಲ್ಲಿ ಮಂಡಿಸುವ ಸಂದರ್ಭದಲ್ಲಿ ನಿರ್ಮಲಾ ಅವರು ಈ ವಿಷಯ ತಿಳಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಳವಡಿಸಿಕೊಳ್ಳಲು ಅನುವಾಗುವ ರೀತಿಯಲ್ಲಿ ಸಮಿತಿಯ ಎನ್‌ಪಿಎಸ್‌ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಬಿಜೆಪಿ ಆಡಳಿತ ಇಲ್ಲದ ಹಲವು ರಾಜ್ಯಗಳು ಹಳೆಯ ಪಿಂಚಣಿ ವ್ಯವಸ್ಥೆಗೆ (ಒ‍‍‍‍ಪಿಎಸ್) ಮರಳಲು ತೀರ್ಮಾನಿಸಿರುವ ಸಂದರ್ಭದಲ್ಲಿ ಕೇಂದ್ರವು ಈ ತೀರ್ಮಾನ ಕೈಗೊಂಡಿದೆ. ಹಲವು ರಾಜ್ಯಗಳಲ್ಲಿ ನೌಕರರ ಸಂಘಟನೆಗಳು ಒಪಿಎಸ್ ಜಾರಿಗೆ ಆಗ್ರಹಿಸಿವೆ. 2004ರ ಜನವರಿ 1ರ ನಂತರ ನೇಮಕ ಆದವರಿಗೆ ಒಪಿಎಸ್ ಜಾರಿಗೆ ತರುವ ಪ್ರಸ್ತಾವ ತನ್ನ ಪರಿಶೀಲನೆಯಲ್ಲಿ ಇಲ್ಲ ಎಂದು ಕೇಂದ್ರವು ಸಂಸತ್ತಿಗೆ ಈಚೆಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.