ಕೋಲ್ಕತ್ತದಲ್ಲಿ ಭಾನುವಾರ ಒಳನಾಡು ಜಲಮಾರ್ಗದಲ್ಲಿ ಸರಕು ಸಾಗಣೆ ಹಡಗುಗಳ ಸಂಚಾರಕ್ಕೆ ಕೇಂದ್ರ ಹಡಗು, ಬಂದರು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೊವಾಲ್ ಚಾಲನೆ ನೀಡಿದರು.
ಪಿಟಿಐ ಚಿತ್ರ
ಕೋಲ್ಕತ್ತ: ದೇಶದ ಒಳನಾಡು ಜಲಮಾರ್ಗಗಳಲ್ಲಿ ಸರಕು ಸಾಗಣೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಭಾನುವಾರ ‘ಜಲವಾಹಕ’ ಯೋಜನೆಗೆ ಚಾಲನೆ ನೀಡಿದೆ.
ರಾಷ್ಟ್ರೀಯ ಜಲಮಾರ್ಗಗಳಾದ ಗಂಗಾ, ಬ್ರಹ್ಮಪುತ್ರ ಹಾಗೂ ಬಾರಕ್ ನದಿ ವ್ಯಾಪ್ತಿಯಲ್ಲಿ ಸುಸ್ಥಿರ ಹಾಗೂ ಕಡಿಮೆ ಖರ್ಚಿನಲ್ಲಿ ಹಡಗುಗಳ ಮೂಲಕ ಸರಕು ಸಾಗಣೆಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶವಾಗಿದೆ.
ಮೂರು ಸರಕು ಸಾಗಣೆ ಹಡಗುಗಳ ಸಂಚಾರಕ್ಕೆ ಚಾಲನೆ ನೀಡಿದ ಕೇಂದ್ರ ಹಡಗು, ಬಂದರು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೊವಾಲ್ ಮಾತನಾಡಿ, ‘ಸಾಗಣೆ ವೆಚ್ಚ ತಗ್ಗಿಸುವ ಜೊತೆಗೆ ರಸ್ತೆ ಮತ್ತು ರೈಲು ಸಾಗಣೆಯಲ್ಲಿನ ದಟ್ಟಣೆ ಕಡಿಮೆ ಮಾಡುವುದೇ ಈ ಯೋಜನೆ ಗುರಿಯಾಗಿದೆ’ ಎಂದರು.
ಈ ಜಲಮಾರ್ಗದಲ್ಲಿ 300 ಕಿ.ಮೀ.ಗೂ ಹೆಚ್ಚು ದೂರದವರೆಗೆ ಸರಕುಗಳ ಸಾಗಣೆ ಕಾರ್ಯಾಚರಣೆಯ ಒಟ್ಟು ವೆಚ್ಚದ ಪೈಕಿ ಶೇ 30ರಷ್ಟು ಹಣವನ್ನು ಯೋಜನೆಯಡಿ ಸರ್ಕಾರವೇ ಭರಿಸಲಿದೆ. ಯೋಜನೆಯು ಮೂರು ವರ್ಷಗಳ ವರೆಗೆ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದರು.
ಭಾರತದ ಒಳನಾಡು ಜಲಮಾರ್ಗಗಳ ಪ್ರಾಧಿಕಾರ (ಐಡಬ್ಲ್ಯುಎಐ), ಒಳನಾಡು ಮತ್ತು ಕರಾವಳಿ ಶಿಪ್ಪಿಂಗ್ ಕಂಪನಿಯಿಂದ ಜಂಟಿಯಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ಕೋಲ್ಕತ್ತ–ಪಟ್ನಾ–ವಾರಾಣಸಿ ಮತ್ತು ಕೋಲ್ಕತ್ತ–ಪಾಂಡು (ಗುವಾಹಟಿ) ಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಭಾರತದಲ್ಲಿ ಒಳನಾಡು ಜಲಮಾರ್ಗದ ವ್ಯಾಪ್ತಿಯು 20,236 ಕಿ.ಮೀ.ನಷ್ಟಿದೆ. ಅಮೆರಿಕ ಮತ್ತು ಚೀನಾಕ್ಕೆ ಹೋಲಿಸಿದರೆ ಈ ಮಾರ್ಗದ ಬಳಕೆಯು ಕಡಿಮೆಯಿದೆ.
ಅಲ್ಟ್ರಾಟೆಕ್ ಸಿಮೆಂಟ್ ಒಳನಾಡು ಜಲಮಾರ್ಗ ಬಳಸಿದ ಮೊದಲ ಸಿಮೆಂಟ್ ಕಂಪನಿ ಎಂಬ ಹೆಗ್ಗಳಿಕೆಗ ಪಡೆದಿದೆ. 2023ರಲ್ಲಿ ಈ ಕಂಪನಿಯು ಒಡಿಶಾದ ಪರದೀಪ್ ಬಂದರಿನಿಂದ ಗುಜರಾತ್‌ನ ಅಮ್ರೇಲಿಯಲ್ಲಿ ಇರುವ ತನ್ನ ಸಿಮೆಂಟ್ ತಯಾರಿಕಾ ಘಟಕಕ್ಕೆ ಫಾಸ್ಫೋಜಿಪ್ಸಂ ಸಾಗಿಸಲು ಜಲಮಾರ್ಗ ಬಳಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.