ADVERTISEMENT

ಪೆಟ್ರೋಲ್‌, ಡೀಸೆಲ್‌ ಎಕ್ಸೈಸ್‌ ಸುಂಕ ಸಂಗ್ರಹ ₹ 3.35 ಲಕ್ಷ ಕೋಟಿ

ಪಿಟಿಐ
Published 19 ಜುಲೈ 2021, 14:45 IST
Last Updated 19 ಜುಲೈ 2021, 14:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್ ಮೇಲಿನ ಎಕ್ಸೈಸ್‌ ಸುಂಕವನ್ನು ಕಳೆದ ವರ್ಷ ಗರಿಷ್ಠ ಮಟ್ಟಕ್ಕೆ ಏರಿಕೆ ಮಾಡಿದ ಬಳಿಕ ಸುಂಕ ಸಂಗ್ರಹವು ಶೇಕಡ 88ರಷ್ಟು ಹೆಚ್ಚಾಗಿದ್ದು ₹ 3.35 ಲಕ್ಷ ಕೋಟಿಗೆ ತಲುಪಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೆಲಿ ಅವರು ಸೋಮವಾರ ಲೋಕಸಭೆಗೆ ಈ ಮಾಹಿತಿ ನೀಡಿದ್ದಾರೆ.

2020ರ ಏಪ್ರಿಲ್‌ನಿಂದ 2021ರ ಮಾರ್ಚ್‌ವರೆಗೆ ಪೆಟ್ರೋಲ್‌ ಮತ್ತು ಡಿಸೆಲ್ ಮೇಲಿನ ಎಕ್ಸೈಸ್‌ ಸುಂಕ ಸಂಗ್ರಹವು ₹ 3.35 ಲಕ್ಷ ಕೋಟಿಗೆ ಏರಿಕೆ ಆಗಿದೆ. ಅದಕ್ಕೂ ಹಿಂದಿನ ಆರ್ಥಿಕ ವರ್ಷದಲ್ಲಿ ಎಕ್ಸೈಸ್ ಸುಂಕ ಸಂಗ್ರಹವು ₹ 1.78 ಲಕ್ಷ ಕೋಟಿ ಆಗಿತ್ತು.

ADVERTISEMENT

ಕೋವಿಡ್‌ ಸಾಂಕ್ರಾಮಿಕದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರವು ಭಾರಿ ಕುಸಿತ ಕಂಡಿದ್ದರ ಪ್ರಯೋಜನ ಪಡೆಯಲು ಕೇಂದ್ರ ಸರ್ಕಾರವು ಕಳೆದ ವರ್ಷ ಪೆಟ್ರೋಲ್‌ ಮೇಲಿನ ಎಕ್ಸೈಸ್‌ ಸುಂಕವನ್ನು ಲೀಟರಿಗೆ ₹ 32.9ಕ್ಕೆ ಏರಿಕೆ ಮಾಡಿದೆ. ಅದಕ್ಕೂ ಮೊದಲು ಎಕ್ಸೈಸ್ ಸುಂಕವು ಲೀಟರಿಗೆ₹ 19.98 ಆಗಿತ್ತು. ಅದೇ ರೀತಿ, ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕವು ಲೀಟರಿಗೆ ₹ 15.83 ಇದ್ದಿದ್ದು ₹ 31.8ಕ್ಕೆ ಏರಿಕೆ ಆಗಿದೆ ಎಂದು ಅವರು ಲಿಖಿತ ಉತ್ತರ ನೀಡಿದ್ದಾರೆ.

ಕೋವಿಡ್‌ ಸಾಂಕ್ರಾಮಿಕವನ್ನು ನಿಯಂತ್ರಿಸಲು ಹೇರಿದ ಲಾಕ್‌ಡೌನ್‌ ಮತ್ತು ಇತರೆ ನಿರ್ಬಂಧಗಳಿಂದಾಗಿ ಆರ್ಥಿಕ ಚಟುವಟಿಕೆಗಳು ಮತ್ತು ವಾಹನ ಸಂಚಾರ ತಗ್ಗಿತ್ತು. ಈ ಕಾರಣಗಳಿಂದಾಗಿ ಇಂಧನ ಮಾರಾಟ ಕಡಿಮೆ ಆಗಿದೆ. ಇಲ್ಲದಿದ್ದರೆ ತೆರಿಗೆ ಸಂಗ್ರಹವು ಇನ್ನಷ್ಟು ಹೆಚ್ಚಾಗುತ್ತಿತ್ತು.

2021–22ನೇ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ಪೆಟ್ರೋಲ್‌ ದರವನ್ನು 39 ಬಾರಿ ಮತ್ತು ಡೀಸೆಲ್‌ ದರವನ್ನು 36 ಬಾರಿ ಹೆಚ್ಚಳ ಮಾಡಲಾಗಿದೆ. ಈ ಅವಧಿಯಲ್ಲಿ ಒಂದು ಬಾರಿ ಪೆಟ್ರೋಲ್ ದರ ಮತ್ತು ಎರಡು ಬಾರಿ ಡೀಸೆಲ್‌ ದರ ತಗ್ಗಿಸಲಾಗಿದೆ ಎಂದು ತೆಲಿ ಮಾಹಿತಿ ನೀಡಿದ್ದಾರೆ.

2020–21ರಲ್ಲಿ ಪೆಟ್ರೋಲ್‌ ದರವು 76 ಬಾರಿ ಹೆಚ್ಚಾಗಿದ್ದು 10 ಬಾರಿ ಇಳಿಕೆ ಆಗಿದೆ. ಡೀಸೆಲ್‌ ದರವು 73 ಬಾರಿ ಹೆಚ್ಚಾಗಿದ್ದರೆ 24 ಬಾರಿ ಇಳಿಕೆ ಆಗಿದೆ ಎಂದಿದ್ದಾರೆ.

ಪೆಟ್ರೋಲ್‌, ಡೀಸೆಲ್‌, ವಿಮಾನ ಇಂಧನ, ನೈಸರ್ಗಿಕ ಅನಿಲ ಮತ್ತು ಕಚ್ಚಾತೈಲದ ಮೇಲಿನ ಎಕ್ಸೈಸ್‌ ಸುಂಕ ಸಂಗ್ರಹವು ಈ ವರ್ಷದ ಏಪ್ರಿಲ್‌–ಜೂನ್‌ ಅವಧಿಯಲ್ಲಿ ₹ 1.01 ಲಕ್ಷ ಕೋಟಿ ಆಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಅವರು ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

2020–21ರಲ್ಲಿ ಒಟ್ಟಾರೆ ಎಕ್ಸೈಸ್ ಸುಂಕ ಸಂಗ್ರಹವು ₹ 3.89 ಲಕ್ಷ ಕೋಟಿಗಳಷ್ಟಾಗಿದೆ.

ಎಕ್ಸೈಸ್‌ ಸುಂಕ ಸಂಗ್ರಹ (ಲಕ್ಷ ಕೋಟಿಗಳಲ್ಲಿ)
2018–19
; ₹2.13
2019–20; ₹1.78
2020–21; ₹3.35

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.