ADVERTISEMENT

ರಿಯಲ್‌ ಎಸ್ಟೇಟ್‌ ಸಮಸ್ಯೆಗೆ ಸ್ಪಂದಿಸಿ: ಸಚಿವ ‍ಗೋಯಲ್‌

ಬ್ಯಾಂಕ್‌ಗಳಿಗೆ ಕೇಂದ್ರ ಹಣಕಾಸು ಸಲಹೆ

ಪಿಟಿಐ
Published 14 ಫೆಬ್ರುವರಿ 2019, 20:15 IST
Last Updated 14 ಫೆಬ್ರುವರಿ 2019, 20:15 IST
ಪೀಯೂಷ್‌ ಗೋಯಲ್‌
ಪೀಯೂಷ್‌ ಗೋಯಲ್‌   

ನವದೆಹಲಿ : ವಸತಿ ನಿರ್ಮಾಣ ವಲಯವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ರಿಯಲ್‌ ಎಸ್ಟೇಟ್‌ ಪ್ರತಿನಿಧಿಗಳ ಜತೆ 15 ದಿನಗಳಲ್ಲಿ ಸಭೆ ನಡೆಸಲು ಕೇಂದ್ರ ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಅವರು ಬ್ಯಾಂಕ್‌ಗಳಿಗೆ ಸಲಹೆ ನೀಡಿದ್ದಾರೆ.

ಇಲ್ಲಿ ಗುರುವಾರ ನಡೆದ ರಿಯಲ್‌ ಎಸ್ಟೇಟ್‌ ನಿರ್ಮಾಣ­ಗಾ­ರರ ಸಂಘಗಳ ಒಕ್ಕೂಟದ (ಕ್ರೆಡಾಯ್‌) ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು. ವಸತಿ ನಿರ್ಮಾಣ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು ಅವುಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯವಾದ ಹಣಕಾಸಿನ ನೆರವು ಒದಗಿಸಬೇಕು ಎಂದೂ ಸೂಚಿಸಿದ್ದಾರೆ.

‘ಮುಂದಿನ ಹದಿನೈದು ದಿನಗಳಲ್ಲಿ ಭಾರತದ ಬ್ಯಾಂಕ್‌ಗಳ ಸಂಘವು (ಐಬಿಎ), ರಿಯಲ್‌ ಎಸ್ಟೇಟ್‌ ಪ್ರತಿನಿಧಿಗಳ ಜತೆ ಚರ್ಚಿಸಿ ಈ ವಲಯಕ್ಕೆ ಬೇಕಾದ ಹಣಕಾಸು ನೆರವು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಿದೆ’ ಎಂದರು.

ADVERTISEMENT

‘ರಿಯಲ್‌ ಎಸ್ಟೇಟ್‌ ವಲಯಕ್ಕೆ ಸಂಬಂಧಿಸಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿತದ ಬಹುದಿನಗಳ ಬೇಡಿಕೆಯನ್ನು ಸದ್ಯದಲ್ಲೇ ನೆರವೇರಿಸಲಾಗುವುದು’ ಎಂದೂ ಭರವಸೆ ನೀಡಿದ್ದಾರೆ.

‘ಈ ವಲಯಕ್ಕೆ ಅನ್ವಯಿಸಿರುವ ಜಿಎಸ್‌ಟಿ ತಗ್ಗಿಸುವ ಬಗ್ಗೆ ಸಚಿವರ ಸಮಿತಿಯು ಹೊಸ ಸೂತ್ರ ಸಿದ್ಧಪಡಿಸುತ್ತಿದೆ. ಸಮಿತಿಯು ಕೈಗೊಳ್ಳುವ ಅಂತಿಮ ನಿರ್ಧಾರವು ನಿಮಗೆ ಒಪ್ಪಿಗೆಯಾಗುವ ಬಗ್ಗೆ ನನಗೆ ಭರವಸೆ ಇದೆ’ ಎಂದು ಅವರು ರಿಯಲ್‌ ಎಸ್ಟೇಟ್ ಉದ್ಯಮಿಗಳಿಗೆ ಭರವಸೆ ನೀಡಿದರು.

ಸಮಿತಿಯ ಒಲವು: ರಿಯಲ್‌ ಎಸ್ಟೇಟ್‌ ವಲಯದ ಮೇಲಿನ ಜಿಎಸ್‌ಟಿ ತಗ್ಗಿಸುವ ಬಗ್ಗೆ ರಾಜ್ಯ ಸಚಿವರ ಸಮಿತಿಯು ಒಲವು ವ್ಯಕ್ತಪಡಿಸಿದೆ.

ನಿರ್ಮಾಣ ಹಂತದಲ್ಲಿ ಇರುವ ವಸತಿ ಯೋಜನೆಗಳಿಗೆ ಅಥವಾ ಮಾರಾಟ ಸಂದರ್ಭದಲ್ಲಿ ವಾಸಕ್ಕೆ ಯೋಗ್ಯ ಪ್ರಮಾಣಪತ್ರ ನೀಡದ ಫ್ಲ್ಯಾಟ್‌ಗಳಿಗೆ ಸದ್ಯಕ್ಕೆ ‘ಐಟಿಸಿ’ ಸೇರಿದಂತೆ ಶೇ 12 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದನ್ನು ಶೇ 5ಕ್ಕೆ ಇಳಿಸಲು ಮತ್ತು ಕೈಗೆಟುಕುವ ಮನೆಗಳಿಗೆ ಜಿಎಸ್‌ಟಿಯನ್ನು ಶೇ 8ರ ಬದಲಿಗೆ ಶೇ 3ಕ್ಕೆ ಇಳಿಸುವ ಬಗ್ಗೆ ಶಿಫಾರಸು ಮಾಡಲು ಸಮಿತಿ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.