ನವದೆಹಲಿ: ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಮತ್ತು ಭಾರತದಲ್ಲಿನ ಅಮೆರಿಕದ ರಾಯಭಾರಿ ಸರ್ಗಿಯೊ ಗೋರ್ ಅವರ ಜೊತೆ ಮಾತುಕತೆ ನಡೆಸಿರುವುದಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧವನ್ನು ವಿಸ್ತರಿಸುವ ವಿಚಾರವಾಗಿ ಮಾತುಕತೆ ನಡೆದಿದೆ ಎಂದು ಗೋಯಲ್ ತಿಳಿಸಿದ್ದಾರೆ.
ಅವರಿಬ್ಬರ ಜೊತೆಗಿನ ಮಾತುಕತೆಯು ಬಹಳ ಫಲಪ್ರದವಾಗಿತ್ತು ಎಂದು ಗೋಯಲ್, ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ. ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಹಂತಕ್ಕೆ ಸಂಬಂಧಿಸಿದ ಕಡತವನ್ನು ಅಂತಿಮಗೊಳಿಸಲು ಎರಡೂ ದೇಶಗಳು ಯತ್ನಿಸುತ್ತಿರುವ ಸಂದರ್ಭದಲ್ಲಿ ಈ ಭೇಟಿ ಮಹತ್ವ ಪಡೆದಿದೆ.
ಭಾರತ ಮತ್ತು ಅಮೆರಿಕದ ಅಧಿಕಾರಿಗಳು ವ್ಯಾಪಾರ ಒಪ್ಪಂದದ ಕುರಿತ ಮಾತುಕತೆಗೆ ವಾಷಿಂಗ್ಟನ್‌ನಲ್ಲಿ ಈ ವಾರ ಸಭೆ ಸೇರಬೇಕಿತ್ತು. ಆದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಧಿಸಿದ ಪ್ರತಿಸುಂಕಗಳನ್ನು ಅಲ್ಲಿನ ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿದ ನಂತರದಲ್ಲಿ ಈ ಸಭೆ ಮುಂದೂಡಿಕೆ ಆಗಿದೆ.
ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾದ ನಂತರದಲ್ಲಿ ಅಮೆರಿಕವು ಎಲ್ಲ ದೇಶಗಳ ಮೇಲೆ 150 ದಿನಗಳ ಅವಧಿಗೆ ಅನ್ವಯವಾಗುವಂತೆ ಶೇ 10ರಷ್ಟು ಸುಂಕ ವಿಧಿಸಿದೆ. ಈ ಸುಂಕವನ್ನು ಶೇ 15ಕ್ಕೆ ಹೆಚ್ಚಿಸಲಾಗುತ್ತದೆ ಎಂದು ಟ್ರಂಪ್ ಅವರು ನಂತರ ಹೇಳಿದ್ದರಾದರೂ, ಅದರ ಕುರಿತಾಗಿ ಆದೇಶ ಆಗಿಲ್ಲ.
ಅಮೆರಿಕದಲ್ಲಿನ ಸುಂಕದ ವಿಚಾರವಾಗಿ ಸ್ಪಷ್ಟತೆ ಸಿಕ್ಕಿದ ನಂತರದಲ್ಲಿ ಭಾರತವು ಆ ದೇಶದ ಜೊತೆ ವ್ಯಾಪಾರ ಒಪ್ಪಂದ ಕುರಿತಾದ ಮಾತುಕತೆಯನ್ನು ಪುನರಾರಂಭಿಸಲಿದೆ ಎಂದು ಗೋಯಲ್ ಅವರು ಮಂಗಳವಾರ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.