ADVERTISEMENT

ದ್ರಾಕ್ಷಿ, ಖರ್ಬೂಜ ಮಾರುಕಟ್ಟೆಗೆ ಲಗ್ಗೆ

ನಗರದ ಪ್ರಮುಖ ವೃತ್ತಗಳಲ್ಲಿ ಕಾಣಸಿಗುವ ದ್ರಾಕ್ಷಿ ಗೊಂಚಲು

ಬಿ.ಜಿ.ಪ್ರವೀಣಕುಮಾರ
Published 22 ಫೆಬ್ರುವರಿ 2020, 10:32 IST
Last Updated 22 ಫೆಬ್ರುವರಿ 2020, 10:32 IST
ಯಾದಗಿರಿಯ ಸುಭಾಷ ವೃತ್ತದ ಬಳಿ ದ್ರಾಕ್ಷಿ ಹಣ್ಣು ಮಾರಾಟ ಮಾಡುತ್ತಿರುವ ದೃಶ್ಯ
ಯಾದಗಿರಿಯ ಸುಭಾಷ ವೃತ್ತದ ಬಳಿ ದ್ರಾಕ್ಷಿ ಹಣ್ಣು ಮಾರಾಟ ಮಾಡುತ್ತಿರುವ ದೃಶ್ಯ   

ಯಾದಗಿರಿ: ನಗರದ ವಿವಿಧ ಪ್ರಮುಖ ವೃತ್ತಗಳಾದ ಸುಭಾಷ ವೃತ್ತ, ಚಿತ್ತಾಪುರ ರಸ್ತೆ, ಹೊಸ, ಹಳೆ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ರಸ್ತೆ, ಗಾಂಧಿ ವೃತ್ತ, ಗಂಜ್‌ ವೃತ್ತ ಸೇರಿದಂತೆ ವಿವಿಧ ಕಡೆ ದ್ರಾಕ್ಷಿ, ಖರ್ಬೂಜ ಮಾರಾಟ ಜೋರಾಗಿ ನಡೆಯುತ್ತಿದೆ.

ವಿಜಯಪುರ, ಸೊಲ್ಲಾಪುರ, ಹೈದರಾಬಾದ್‌ ಮತ್ತಿತರರ ಪ್ರದೇಶದಿಂದ ದ್ರಾಕ್ಷಿ ಬಂದಿದೆ. ತಿನ್ನಲು ರುಚಿಯಾಗಿರುವುದರಿಂದ ಜನರು ಚೌಕಾಶಿ ಮಾಡಿ ಖರೀದಿಸುತ್ತಿದ್ದಾರೆ.

ತಳ್ಳುಗಾಡಿಗಳಲ್ಲಿ ಒಂದು ಕ್ವಿಂಟಲ್ ದ್ರಾಕ್ಷಿ ಹಣ್ಣು ಇಟ್ಟು ವ್ಯಾಪಾರಿಗಳು ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ಆಕಾರದ ದ್ರಾಕ್ಷಿ ಕೇಜಿಗೆ ₹60 ರಿಂದ 80 ವರೆಗೆ ಮಾರಾಟವಾಗುತ್ತಿದೆ.

ADVERTISEMENT

ಇನ್ನೂ ಖರ್ಬೂಜ ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬೇಸಿಗೆ ಝಳ ಮೈಸುಡುತ್ತಿದ್ದು, ಖರ್ಬೂಜ ಹಣ್ಣುದೇಹದ ಶಾಖಾ ನಿವಾರಿಸಲು ಸಹಕಾರಿಯಾಗಿದ್ದರಿಂದ ಖರ್ಜೂಜ ಹಣ್ಣಿಗೆ ಬೇಡಿಕೆ ಕೂಡ ಹೆಚ್ಚಳವಾಗಿದೆ. ಕೇಜಿಗೆ ₹40 ಗೆ ಮಾರಾಟವಾಗುತ್ತದೆ. ಕೆರೆ ಪ್ರದೇಶಗಳಲ್ಲಿ ಬೆಳೆದ ಖರ್ಬೂಜವನ್ನು ಲಗೇಜ್ ಆಟೊದಲ್ಲಿಟ್ಟು ಮಾರಾಟ ಮಾಡುತ್ತಿರುವುದು ನಗರದಲ್ಲಿ ಕಂಡು ಬರುತ್ತಿದೆ.

‘ದ್ರಾಕ್ಷಿ ಹಣ್ಣು ಕ್ವಿಂಟಲ್‌ಗೆ ಐದೂವರೆ ಸಾವಿರ ಇದೆ. ಮಾಲಿಕರು ಬೇರೆ ಕಡೆಯಿಂದ ಮಾಲು ತರಿಸುತ್ತಾರೆ. ಬೆಳಿಗ್ಗೆಯಿಂದ ಸಂಜೆ ತನಕ ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುತ್ತೇವೆ. ಕೂಲಿ ಲೆಕ್ಕದಲ್ಲಿ ದುಡಿಯುತ್ತೇವೆ. ಈಗ ದ್ರಾಕ್ಷಿ ಸಿಜನ್‌ ಆಗಿದ್ದರಿಂದ ಮಾರಾಟವೂ ಜೋರಾಗಿದೆ’ ಎನ್ನುತ್ತಾರೆ ಮಹಮದ್‌ ಸಿರಾಜ್‌.

‘ಕೆಲವರು ದರದಲ್ಲಿ ಚೌಕಾಶಿಗಳಿದು ಕಡಿಮೆ ಬೆಲೆಗೆ ಕೇಳುತ್ತಾರೆ. ಆದರೆ, ಉತ್ತಮ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ನಾವು ಜಾಸ್ತಿ ದಿನ ಇಟ್ಟುಕೊಂಡರೂ ಪ್ರಯೋಜನವಿಲ್ಲ. ಕಡಿಮೆ ದರ ಮಾಡಿಕೊಡುತ್ತೇವೆ’ ಎಂದರು.

ಹಣ್ಣುಗಳ ದರ:
ಸೇಬು ಹಣ್ಣು ಕೇಜಿಗೆ ₹120, ಸಂತೂರ ₹60, ನೀಲಿ ದ್ರಾಕ್ಷಿ ₹80, ಬಾಳೆಹಣ್ಣು ಡಜನ್‌ಗೆ ₹40, ಸಪೋಟ ₹40 ಇದೆ.

ತರಕಾರಿ ದರ:
ಈ ತಿಂಗಳಲ್ಲಿ ಜಿಲ್ಲೆಯ ವಿವಿಧ ಕಡೆಯಿಂದ ಈರುಳ್ಳಿ ಬಂದಿರುವುದರಿಂದ ಕೇಜಿಗೆ ₹40 ಆಗಿದೆ. ತರಕಾರಿ ಬೆಲೆ ಹೆಚ್ಚಳವಾಗಿಲ್ಲ. ಬಿಸಿಲು ಹೆಚ್ಚಳವಾದಂತೆ ತರಕಾರಿ ಬೆಲೆ ಏರಿಕೆ ಕಾಣಲಿದೆ. ಈಗ ಎಲ್ಲ ತರಕಾರಿಗಳು ಕೇಜಿಗೆ ₹60ಕ್ಕಿಂತ ಹೆಚ್ಚಿಲ್ಲ.

ಚವಳೆಕಾಯಿ, ಬಿಟ್‌ರೂಟ್‌, ಬೀನ್ಸ್‌ ಕೇಜಿಗೆ ₹60 ಇದೆ. ಬೇರೆ ತರಕಾರಿಗಳು ₹40 ಇದೆ. ಸೊಪ್ಪುಗಳು ದರದಲ್ಲಿ ಏರಿಳಿಕೆಯಾಗಿಲ್ಲ. ಪುಂಡೆಪಲ್ಯ, ಪಾಲಕ್‌, ಮೆಂತ್ಯೆ ಸೊಪ್ಪು ಒಂದು ಕಟ್ಟುಗೆ ₹5 ಇದೆ.

***

ದ್ರಾಕ್ಷಿ ಹಣ್ಣು ಒಂದು ಬುಟ್ಟಿಗೆ 20 ಕೇಜಿ ಇರುತ್ತದೆ. ಒಂದೂವರೆ ಕ್ವಿಂಟಲ್ ತಳ್ಳುಗಾಡಿಗೆ ಹಾಕಿಕೊಂಡು ಬಂದಿದ್ದೇನೆ. ಬೆಳಿಗ್ಗೆಯಿಂದ ₹800 ಸಂಪಾದಿಸಿದ್ದೇನೆ
ಗೌಸ್‌ ಖಾನ್‌, ದ್ರಾಕ್ಷಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.