ADVERTISEMENT

ಹೆಸರುಕಾಳು: ಪ್ರತಿ ಕ್ವಿಂಟಲ್‌ಗೆ ₹7,050 ಬೆಂಬಲ ಬೆಲೆಗೆ ಒತ್ತಾಯ

ಮುಖ್ಯಮಂತ್ರಿಗೆ ಕೃಷಿ ಬೆಲೆ ಆಯೋಗ ಪತ್ರ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 19:45 IST
Last Updated 1 ಸೆಪ್ಟೆಂಬರ್ 2019, 19:45 IST
ಹೆಸರು ಕಾಳು
ಹೆಸರು ಕಾಳು   

ಬೆಂಗಳೂರು: ರಾಜ್ಯದಲ್ಲಿ ಹೆಸರುಕಾಳಿನ ಬೆಲೆ ಕುಸಿಯುತ್ತಿದ್ದು, ಕೇಂದ್ರ ಸರ್ಕಾರ ಘೋಷಿಸಿರುವ ಲಾಭದಾಯಕ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ ₹7,050 ರಂತೆ ಖರೀದಿಸಲು ಕೃಷಿ ಬೆಲೆ ಆಯೋಗ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದೆ.

ಆಗಸ್ಟ್‌ ತಿಂಗಳ ಕೊನೆಯಲ್ಲಿ ಹೆಸರು ಕಾಳಿನ ಆವಕ ಆರಂಭವಾಗಿದ್ದು, ಕೃಷಿ ಬೆಲೆ ಆಯೋಗ ಅಭಿವೃದ್ಧಿಪಡಿಸಿರುವ ‘ಕೃಪ’ ಡ್ಯಾಷ್‌ಬೋರ್ಡ್‌ನಲ್ಲಿ ಪರಿಶೀಲಿಸಿದಾಗ, ಪ್ರಮುಖ ಮಾರುಕಟ್ಟೆಗಳಲ್ಲಿನ ಧಾರಣೆಯು ಕೇಂದ್ರ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ಇದೆ ಎಂದು ಆಯೋಗದ ಅಧ್ಯಕ್ಷ ಡಾ.ಟಿ.ಎನ್‌.ಪ್ರಕಾಶ್‌ ಕಮ್ಮರಡಿ ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಆವಕ ಪ್ರಮಾಣ ಸೆಪ್ಟಂಬರ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಹೆಚ್ಚಲಿದ್ದು, ಸಗಟು ಮಾರುಕಟ್ಟೆ ಬೆಲೆ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಕೃಷಿ ಬೆಲೆ ಆಯೋಗದ ಕಂಪ್ಯೂಟರ್‌ ಮಾಡೆಲ್‌ಗಳ ಆಧಾರದಿಂದ ವಿಶ್ಲೇಷಿಸಿರುವ ಬೆಲೆ ಮುನ್ಸೂಚನೆಯೂ ಈ ಮಾಹಿತಿ ನೀಡಿದೆ ಎಂದು ತಿಳಿಸಿದ್ದಾರೆ.

ADVERTISEMENT

ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿಗಳಂತಹ ವೈಪರೀತ್ಯ ಪರಿಸ್ಥಿತಿ ಎದುರಿಸುತ್ತಿರುವಾಗ ಹೆಸರುಕಾಳಿನ ಬೆಲೆ ಕುಸಿತವಾಗಿ ರೈತರು ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಲು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಬೇಕು. ಆದ್ದರಿಂದ, ಕೇಂದ್ರ ಘೋಷಿಸಿರುವ ಬೆಂಬಲ ಬೆಲೆಯಲ್ಲಿ ರೈತರಿಂದ ಉತ್ಪನ್ನವನ್ನು ಖರೀದಿಸಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಪ್ರಕಾಶ್‌ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.