ಶಕ್ತಿಕಾಂತ ದಾಸ್
–ಪಿಟಿಐ ಚಿತ್ರ
ಮುಂಬೈ: ‘ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಕುಸಿತಕ್ಕೆ ರೆಪೊ ದರ ಕಡಿತಗೊಳಿಸದಿರುವುದು ಕಾರಣವಲ್ಲ. ಇದರ ಹಿಂದೆ ಹಲವು ಕಾರಣಗಳು ಬೆಸೆದುಕೊಂಡಿವೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ನಿರ್ಗಮಿತ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ತಮ್ಮ ಅಧಿಕಾರಾವಧಿಯ ಕೊನೆಯ ದಿನವಾದ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸದ್ಯ ಚಿಲ್ಲರೆ ಹಣದುಬ್ಬರ ಏರಿಕೆಯ ಹಾದಿ ಹಿಡಿದಿದೆ. ಇದರ ನಿಯಂತ್ರಣದ ಮೂಲಕ ಸಮತೋಲನ ಕಾಯ್ದುಕೊಳ್ಳುವುದೇ ಆರ್‌ಬಿಐ ಮುಂದಿರುವ ಸವಾಲಾಗಿದೆ’ ಎಂದರು.
ದಾಸ್ ಅವರ ಆರು ವರ್ಷದ ಅಧಿಕಾರಾವಧಿಯಲ್ಲಿ ಕೋವಿಡ್, ರಷ್ಯಾ–ಉಕ್ರೇನ್ ಯುದ್ಧ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು ಸವಾಲಿನಿಂದ ಕೂಡಿತ್ತು. ದಾಸ್ ಅಧ್ಯಕ್ಷತೆಯಲ್ಲಿ ನಡೆದ ಆರ್‌ಬಿಐ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ಸತತ 11 ಬಾರಿ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
‘ಭವಿಷ್ಯದ ಆರ್ಥಿಕತೆಯ ಮುನ್ನೋಟ ಹಾಗೂ ಜಾಗತಿಕ ಬಿಕ್ಕಟ್ಟಿನಿಂದಾಗಿ ಬಡ್ಡಿದರ ಪರಿಷ್ಕರಣೆಗೆ ಮುಂದಾಗಿಲ್ಲ’ ಎಂದರು.
‘ನಮ್ಮ ಸುತ್ತಲೂ ನಡೆಯುತ್ತಿರುವ ಆರ್ಥಿಕ ಚಟುವಟಿಕೆಗಳ ಬಗ್ಗೆ ಎಂಪಿಸಿ ಮತ್ತು ಆರ್‌ಬಿಐಗೆ ಮನದಟ್ಟಾಗಿದೆ. ಹಾಗಾಗಿ, ನಮ್ಮ ಆಯ್ಕೆ ಉತ್ತಮವಾಗಿದೆ’ ಎಂದು ಸಮರ್ಥಿಸಿಕೊಂಡರು.
‘ದೇಶದ ಆರ್ಥಿಕತೆ ಬೆಳವಣಿಗೆಯು ಚೇತರಿಕೆ ಹಾದಿಯಲ್ಲಿದೆ. ಜಾಗತಿಕ ಬಿಕ್ಕಟ್ಟಿನಿಂದ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿದೆ’ ಎಂದರು.
‘ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರಿಗೆ ಅಪಾರ ಅನುಭವವಿದೆ. ಕೇಂದ್ರೀಯ ಬ್ಯಾಂಕ್‌ಗೆ ಉತ್ತಮ ಕೊಡುಗೆ ನೀಡಲಿದ್ದಾರೆ’ ಎಂದು ಹೇಳಿದರು.
ತ್ವರಿತಗತಿ ಹಾಗೂ ಸುಲಭವಾಗಿ ಸಾಲ ಸೌಲಭ್ಯ ಕಲ್ಪಿಸಲು ಆರ್‌ಬಿಐ ಡಿಜಿಟಲ್ ವೇದಿಕೆಯಾದ ಯುನಿಫೈಡ್ ಲೆಂಡಿಂಗ್ ಇಂಟರ್‌ಫೇಸ್ (ಯುಎಲ್‌ಐ) ಅನ್ನು ರೂಪಿಸಿದ್ದು, ದೇಶದಾದ್ಯಂತ ಆರಂಭಗೊಳ್ಳಲಿದೆ. ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್ ಕರೆನ್ಸಿಯು (ಸಿಬಿಡಿಸಿ) ಭವಿಷ್ಯದ ಕರೆನ್ಸಿಯಾಗಲಿದೆ ಎಂದು ಹೇಳಿದರು.
ಕಳೆದ ಆರು ವರ್ಷದಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ನಡುವೆ ಉತ್ತಮ ಸಹಕಾರ ಮತ್ತು ಸಮನ್ವಯವಿತ್ತುಶಕ್ತಿಕಾಂತ ದಾಸ್ ಆರ್‌ಬಿಐನ ನಿರ್ಗಮಿತ ಗವರ್ನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.