ADVERTISEMENT

ಜಿಎಸ್‌ಟಿ ವರಮಾನ ಸಂಗ್ರಹ ₹ 1.55 ಲಕ್ಷ ಕೋಟಿ

ಪಿಟಿಐ
Published 1 ಫೆಬ್ರುವರಿ 2023, 4:38 IST
Last Updated 1 ಫೆಬ್ರುವರಿ 2023, 4:38 IST
   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ಜನವರಿ ತಿಂಗಳಲ್ಲಿ ಆದ ವರಮಾನ ಸಂಗ್ರಹದ ಮೊತ್ತವು ₹ 1.55 ಲಕ್ಷ ಕೋಟಿಗಿಂತ ಹೆಚ್ಚಾಗಿದೆ. ಇದು ಜಿಎಸ್‌ಟಿ ಮೂಲಕ ತಿಂಗಳೊಂದರಲ್ಲಿ ಸಂಗ್ರಹವಾಗಿರುವ ಎರಡನೆಯ ಅತಿ ಹೆಚ್ಚಿನ ಮೊತ್ತ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

‘ಜನವರಿ 31ರವರೆಗೆ ಸಂಗ್ರಹವಾದ ಜಿಎಸ್‌ಟಿ ವರಮಾನವು ₹ 1,55,922 ಕೋಟಿ. ಇದರಲ್ಲಿ ಕೇಂದ್ರ ಜಿಎಸ್‌ಟಿ ಪಾಲು ₹ 28,963 ಕೋಟಿ. ರಾಜ್ಯಗಳ ಜಿಎಸ್‌ಟಿ ಪಾಲು ₹ 36,730 ಕೋಟಿ. ಏಕೀಕೃತ ಜಿಎಸ್‌ಟಿ ಪಾಲು ₹ 79,599 ಕೋಟಿ ಹಾಗೂ ಸೆಸ್‌ ಪಾಲು ₹ 10,630 ಕೋಟಿ’ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಮಾರ್ಚ್‌ 31ಕ್ಕೆ ಕೊನೆಗೊಳ್ಳಬೇಕಿರುವ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಂಗ್ರಹವಾಗಿರುವ ವರಮಾನವು ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಸಂಗ್ರಹವಾಗಿದ್ದ ವರಮಾನಕ್ಕೆ ಹೋಲಿಸಿದರೆ ಶೇಕಡ 24ರಷ್ಟು ಹೆಚ್ಚು.

ADVERTISEMENT

ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ವರಮಾನ ಸಂಗ್ರಹವು ₹ 1.50 ಲಕ್ಷ ಕೋಟಿಗಿಂತ ಹೆಚ್ಚಾಗಿರುವುದು ಇದು ಮೂರನೆಯ ಬಾರಿ. 2022ರ ಏಪ್ರಿಲ್‌ನಲ್ಲಿ ಸಂಗ್ರಹವಾಗಿದ್ದ ₹ 1.68 ಲಕ್ಷ ಕೋಟಿ ಜಿಎಸ್‌ಟಿ ವರಮಾನವು ಇದುವರೆಗಿನ ಗರಿಷ್ಠ ಮೊತ್ತ.

‘ಕಳೆದ ಒಂದು ವರ್ಷದ ಅವಧಿಯಲ್ಲಿ ಜಿಎಸ್‌ಟಿ ಸಂಗ್ರಹ ಹೆಚ್ಚಿಸಲು ಹಾಗೂ ತೆರಿಗೆ ಪಾವತಿದಾರರು ತೆರಿಗೆ ನಿಯಮಗಳನ್ನು ಸರಿಯಾಗಿ ಪಾಲಿಸುವಂತೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಎಸ್‌ಟಿ ವಿವರಗಳನ್ನು ಸಲ್ಲಿಸುವ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ’ ಎಂದು ಸಚಿವಾಲಯವು ತಿಳಿಸಿದೆ.

ಅಕ್ಟೋಬರ್‌–ಡಿಸೆಂಬರ್‌ ತ್ರೈಮಾಸಿಕದಲ್ಲಿ ಒಟ್ಟು 2.42 ಕೋಟಿ ಜಿಎಸ್‌ಟಿ ವಿವರಗಳು ಸಲ್ಲಿಕೆಯಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 2.19 ಕೋಟಿ ಜಿಎಸ್‌ಟಿ ವಿವರಗಳು ಸಲ್ಲಿಕೆಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.