ADVERTISEMENT

ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ₹2.10 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ಪಿಟಿಐ
Published 1 ಮೇ 2024, 12:16 IST
Last Updated 1 ಮೇ 2024, 12:16 IST
<div class="paragraphs"><p>ಜಿಎಸ್‌ಟಿ&nbsp;&nbsp;</p></div>

ಜಿಎಸ್‌ಟಿ  

   

ನವದೆಹಲಿ: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹವು ದಾಖಲೆಯ ₹2 ಲಕ್ಷ ಕೋಟಿ ದಾಟಿದ್ದು, ಏಪ್ರಿಲ್ ತಿಂಗಳಲ್ಲಿ ₹2.10 ಲಕ್ಷ ಕೋಟಿ ಸಂಗ್ರಹವಾಗಿದೆ.

ದೇಶೀಯ ವಹಿವಾಟು ಮತ್ತು ಆಮದು ಹೆಚ್ಚಳದಿಂದ ತೆರಿಗೆ ಸಂಗ್ರಹವೂ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ. ಈ ಕುರಿತಂತೆ ಹಣಕಾಸು ಸಚಿವಾಲಯವು ಪ್ರಕಟಣೆ ಹೊರಡಿಸಿದೆ.

ADVERTISEMENT

‘ಏಪ್ರಿಲ್ 2024ರಲ್ಲಿ ಸರಕು ಮತ್ತು ಸೇವಾ ತೆರಿಗೆಯು(ಜಿಎಸ್‌ಟಿ) ದಾಖಲೆಯ ₹2.10 ಲಕ್ಷ ಕೋಟಿ ಸಂಗ್ರಹವಾಗಿದೆ. ದೇಶೀಯ ವಹಿವಾಟು ಮತ್ತು ಆಮದು ಹೆಚ್ಚಳವಾಗಿರುವುದರಿಂದ ಶೇ 12.4 ತೆರಿಗೆ ಸಂಗ್ರಹ ಹೆಚ್ಚಳವಾಗಿರುವುದನ್ನು ಇದು ಸೂಚಿಸುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.

ಕಳೆದ ತಿಂಗಳ ಜಿಎಸ್‌ಟಿ ಸಂಗ್ರಹವು ₹ 1.78 ಲಕ್ಷ ಕೋಟಿ ಇದ್ದರೆ, 2023‌ರ ಏಪ್ರಿಲ್‌ನಲ್ಲಿ ₹1.87 ಲಕ್ಷ ಕೋಟಿ ಸಂಗ್ರಹವಾಗಿತ್ತು.

ರೀಫಂಡ್ ಲೆಕ್ಕಾಚಾರದ ಬಳಿಕ ಏಪ್ರಿಲ್ 2024ರ ನಿವ್ವಳ ಜಿಎಸ್‌ಟಿ ಸಂಗ್ರಹ ₹1.92 ಲಕ್ಷ ಕೋಟಿಯಾಗಿದೆ. ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ಈ ವರ್ಷ ಶೇ 15.5ರಷ್ಟು ಹೆಚ್ಚಳ ದಾಖಲಾಗಿದೆ.

ಏಪ್ರಿಲ್‌ನಲ್ಲಿ ಕೇಂದ್ರ ಜಿಎಸ್‌ಟಿ ₹43,846 ಕೋಟಿ ಹಾಗೂ ರಾಜ್ಯ ಜಿಎಸ್‌ಟಿ ₹53,538 ಕೋಟಿ ಸಂಗ್ರಹವಾಗಿದೆ. ಸಮಗ್ರ ಜಿಎಸ್‌ಟಿ ₹99,623 ಕೋಟಿ (ಆಮದು ಸರಕುಗಳ ಮೇಲಿನ ತೆರಿಗೆ ₹37,836 ಕೋಟಿ ಸೇರಿ) ಹಾಗೂ ಪರಿಹಾರ ಸೆಸ್ ₹13,260 ಕೋಟಿ ಸಂಗ್ರಹವಾಗಿದೆ. 

‘ಸಮಗ್ರ ಜಿಎಸ್‌ಟಿ ವಿತರಣೆಯಲ್ಲಿ ಯಾವುದೇ ರಾಜ್ಯಗಳಿಗೆ ಪಾವತಿಯನ್ನು ಬಾಕಿ ಉಳಿಸಿಕೊಂಡಿಲ್ಲ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

‘ಜಿಎಸ್‌ಟಿ ಸಂಗ್ರಹದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿರುವುದು ಆರ್ಥಿಕತೆಯ ಸದೃಢತೆಗೆ ಕನ್ನಡಿ ಹಿಡಿದಿದೆ. ಸಚಿವಾಲಯವು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರಿಂದ ಈ ಸಾಧನೆಯಾಗಿದೆ’ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

‘ಎಟಿಎಫ್‌ ಮತ್ತು ನೈಸರ್ಗಿಕ ಅನಿಲವನ್ನು ಜಿಎಸ್‌ಟಿ ವ್ಯಾ‍ಪ್ತಿಗೆ ತರುವ ಬಗ್ಗೆಯೂ ಹೊಸ ಸರ್ಕಾರ ನಿರ್ಧರಿಸಬಹುದಾಗಿದೆ’ ಎಂದು ಹೇಳಿದ್ದಾರೆ.

‘2017ರ ಜುಲೈನಲ್ಲಿ ಸರ್ಕಾರವು ಜಿಎಸ್‌ಟಿಯನ್ನು ಜಾರಿಗೊಳಿಸಿತು. ಈ ವೇಳೆ ಮಾಸಿಕ ವರಮಾನ ಸಂಗ್ರಹವು ₹90 ಲಕ್ಷವಿತ್ತು. ಈಗ ₹2 ಲಕ್ಷ ಕೋಟಿ ದಾಟಿದೆ. ವಾರ್ಷಿಕ ಸಂಗ್ರಹವು ಶೇ 13ರಷ್ಟು ಏರಿಕೆಯಾಗಿದೆ’ ಎಂದು ಹೇಳಿದ್ದಾರೆ.  ‌‌

‘ಈ ಏರಿಕೆಯಿಂದಾಗಿ ಹೊಸ ಸರ್ಕಾರವು ಜಿಎಸ್‌ಟಿ ಸುಧಾರಣೆಗೆ ಮುಂದಾಗುವ ನಿರೀಕ್ಷೆಯಿದೆ’ ಎಂದು ಪಿಡಬ್ಲ್ಯುಸಿ ಇಂಡಿಯಾದ ಪಾಲುದಾರ ಪ್ರತೀಕ್ ಜೈನ್ ಹೇಳಿದ್ದಾರೆ.

ಕರ್ನಾಟಕಕ್ಕೆ 2ನೇ ಸ್ಥಾನ

ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕವು ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ಏಪ್ರಿಲ್‌ನಲ್ಲಿ ₹15978 ಕೋಟಿ ವರಮಾನ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಶೇ 9ರಷ್ಟು ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ₹37617 ಕೋಟಿ ಸಂಗ್ರಹವಾಗಿದ್ದು ಮೊದಲ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.