
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಫೆಬ್ರುವರಿ ತಿಂಗಳಿನಲ್ಲಿ ₹1.83 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ. ಕಳೆದ ವರ್ಷದ ಫೆಬ್ರುವರಿಗೆ ಹೋಲಿಸಿದರೆ ವರಮಾನ ಸಂಗ್ರಹವು ಶೇ 8.1ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ತಿಳಿಸಿದೆ.
ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಫೆಬ್ರುವರಿವರೆಗೆ ಒಟ್ಟು ₹20.27 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಇದು ಶೇ 8.3ರಷ್ಟು ಏರಿಕೆಯಾಗಿದೆ.
ಆಮದು ಮಾಡಿಕೊಂಡ ಸರಕುಗಳಿಂದ ಬಂದ ವರಮಾನದಲ್ಲಿನ ಹೆಚ್ಚಳ ಮತ್ತು ದೇಶಿ ಮಾರುಕಟ್ಟೆಯಲ್ಲಿ ಮಾರಾಟ ಹೆಚ್ಚಳ ಆಗಿರುವುದು ಫೆಬ್ರುವರಿ ತಿಂಗಳ ಜಿಎಸ್‌ಟಿ ಸಂಗ್ರಹ ಜಾಸ್ತಿ ಆಗಿರುವುದಕ್ಕೆ ಕಾರಣ ಎಂದು ತಿಳಿಸಿದೆ.
ಆಂತರಿಕ ವಹಿವಾಟುಗಳಿಂದ ಬರುವ ಜಿಎಸ್‌ಟಿ ವರಮಾನವು ಶೇ 5.3ರಷ್ಟು ಹೆಚ್ಚಳವಾಗಿ, ₹1.36 ಲಕ್ಷ ಕೋಟಿ ಆಗಿದೆ. ಆಮದು ಸರಕುಗಳಿಂದ ಬಂದ ವರಮಾನದಲ್ಲಿ ಶೇ 17.2ರಷ್ಟು ಏರಿಕೆಯಾಗಿದ್ದು, ₹47,837 ಕೋಟಿ ಆಗಿದೆ. ಒಟ್ಟು ಮರುಪಾವತಿಯು ₹22,595 ಕೋಟಿಯಾಗಿದ್ದು, ಶೇ 10.2ರಷ್ಟು ಹೆಚ್ಚಳವಾಗಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಜಿಎಸ್‌ಟಿ ದರ ಪರಿಷ್ಕರಣೆ ಆಯಿತು. ನವೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹವು ಮಂದಗೊಂಡು ₹1.70 ಲಕ್ಷ ಕೋಟಿ ಆಗಿತ್ತು. ಡಿಸೆಂಬರ್‌ನಲ್ಲಿ ₹1.74 ಲಕ್ಷ ಕೋಟಿ ಮತ್ತು ಜನವರಿಯಲ್ಲಿ ₹1.93 ಲಕ್ಷ ಕೋಟಿ ಸಂಗ್ರಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.