ADVERTISEMENT

ಜಿಎಸ್‌ಟಿ ವರಮಾನ ₹ 1.30 ಲಕ್ಷ ಕೋಟಿ

ಪಿಟಿಐ
Published 1 ನವೆಂಬರ್ 2021, 10:00 IST
Last Updated 1 ನವೆಂಬರ್ 2021, 10:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ಸಂಗ್ರಹ ಆಗಿರುವ ವರಮಾನದ ಮೊತ್ತವು ಅಕ್ಟೋಬರ್‌ ತಿಂಗಳಿನಲ್ಲಿ ₹ 1.30 ಲಕ್ಷ ಕೋಟಿಯ ಗಡಿ ದಾಟಿದೆ.ಜಿಎಸ್‌ಟಿ ವ್ಯವಸ್ಥೆಯು 2017ರಲ್ಲಿ ಅನುಷ್ಠಾನಕ್ಕೆ ಬಂದ ನಂತರದಲ್ಲಿ ಸಂಗ್ರಹ ಆಗಿರುವ ಎರಡನೆಯ ಅತಿಹೆಚ್ಚಿನ ಮೊತ್ತ ಇದು.

ಜಿಎಸ್‌ಟಿ ವರಮಾನ ಸಂಗ್ರಹದ ಪ್ರಮಾಣವು ಸತತ ನಾಲ್ಕು ತಿಂಗಳುಗಳಿಂದ ₹ 1 ಲಕ್ಷ ಕೋಟಿಗಿಂತ ಹೆಚ್ಚಿನ ಮಟ್ಟದಲ್ಲಿ ಇದೆ. ಅಕ್ಟೋಬರ್‌ ತಿಂಗಳಿಗೆ ಸಂಬಂಧಿಸಿದ ಅಂಕಿ–ಅಂಶಗಳು ಹಬ್ಬದ ಸಂದರ್ಭದಲ್ಲಿ ನಡೆದ ಖರೀದಿ ವಹಿವಾಟನ್ನು ಸೂಚಿಸುವಂತೆ ಇವೆ.

ಈ ವರ್ಷದ ಅಕ್ಟೋಬರ್‌ನಲ್ಲಿ ಆಗಿರುವ ಜಿಎಸ್‌ಟಿ ವರಮಾನ ಸಂಗ್ರಹ ಪ್ರಮಾಣವು ಹಿಂದಿನ ವರ್ಷದ ಅಕ್ಟೋಬರ್‌ ತಿಂಗಳಿನ ಮಟ್ಟಕ್ಕೆ ಹೋಲಿಸಿದರೆ ಶೇಕಡ 24ರಷ್ಟು ಹೆಚ್ಚು.

ADVERTISEMENT

‘ಅಕ್ಟೋಬರ್‌ನಲ್ಲಿ ಒಟ್ಟು ₹ 1,30,127 ಕೋಟಿ ವರಮಾನ ಸಂಗ್ರಹ ಆಗಿದೆ. ಇದರಲ್ಲಿ ಕೇಂದ್ರ ಜಿಎಸ್‌ಟಿ ಪಾಲು ₹ 23,861 ಕೋಟಿ, ರಾಜ್ಯ ಜಿಎಸ್‌ಟಿ ಪಾಲು ₹ 30,421 ಕೋಟಿ ಹಾಗೂ ಏಕೀಕೃತ ಜಿಎಸ್‌ಟಿ ಪಾಲು ₹ 67,361 ಕೋಟಿ. ಸೆಸ್‌ ಮೂಲಕ ಸಂಗ್ರಹ ಆಗಿರುವ ಮೊತ್ತ ₹ 8,484 ಕೋಟಿ’ ಎಂದು ಕೇಂದ್ರ ಹಣಕಾಸು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಆರ್ಥಿಕ ಚಟುವಟಿಕೆಗಳಲ್ಲಿ ಕಂಡುಬಂದಿರುವ ಚೇತರಿಕೆಗೆ ಅನುಗುಣವಾಗಿ ಜಿಎಸ್‌ಟಿ ಸಂಗ್ರಹ ಆಗಿದೆ. ಹಾಗೆಯೇ, ಕೋವಿಡ್‌ನ ಎರಡನೆಯ ಅಲೆಯ ನಂತರದಲ್ಲಿ ಪ್ರತಿ ತಿಂಗಳು ಜಿಎಸ್‌ಟಿ ಇ–ವೇ ಬಿಲ್‌ಗಳಲ್ಲಿ ಆಗುತ್ತಿರುವ ಹೆಚ್ಚಳಕ್ಕೆ ಅನುಗುಣವಾಗಿ ವರಮಾನ ಸಂಗ್ರಹದಲ್ಲಿಯೂ ಏರಿಕೆ ಆಗಿದೆ ಎಂದು ಸಚಿವಾಲಯ ಹೇಳಿದೆ.

ಸೆಮಿಕಂಡಕ್ಟರ್‌ ಕೊರತೆಯಿಂದಾಗಿ ಕಾರುಗಳು ಮತ್ತು ಇತರ ಉತ್ಪನ್ನಗಳ ಮಾರಾಟಕ್ಕೆ ಅಡ್ಡಿ ಆಗದೆ ಇದ್ದಿದ್ದರೆ ವರಮಾನ ಸಂಗ್ರಹವು ಇನ್ನಷ್ಟು ಜಾಸ್ತಿ ಇರುತ್ತಿತ್ತು ಎಂದು ಕೂಡ ಸಚಿವಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.