ADVERTISEMENT

ಕೋವಿಡ್‌ ಲಸಿಕೆಗೆ ತೆರಿಗೆ ವಿನಾಯಿತಿ: ಶನಿವಾರ ಜಿಎಸ್‌ಟಿ ಮಂಡಳಿ ಸಭೆ

ಪಿಟಿಐ
Published 10 ಜೂನ್ 2021, 10:50 IST
Last Updated 10 ಜೂನ್ 2021, 10:50 IST
ನೋಯ್ಡಾದಲ್ಲಿ ವ್ಯಕ್ತಿಯೊಬ್ಬನಿಗೆ ಲಸಿಕೆ ನೀಡಲಾಯಿತು, ಚಿತ್ರ: ಪಿಟಿಐ
ನೋಯ್ಡಾದಲ್ಲಿ ವ್ಯಕ್ತಿಯೊಬ್ಬನಿಗೆ ಲಸಿಕೆ ನೀಡಲಾಯಿತು, ಚಿತ್ರ: ಪಿಟಿಐ   

ನವದೆಹಲಿ: ಕೋವಿಡ್‌ ನಿರ್ವಹಣೆಯಲ್ಲಿ ಅಗತ್ಯವಾಗಿರುವ ಕೆಲವು ವಸ್ತುಗಳು ಹಾಗೂ ಕಪ್ಪು ಶಿಲೀಂಧ್ರದ ಚಿಕಿತ್ಸೆಗೆ ಬಳಸುವ ಔಷಧಕ್ಕೆ ತೆರಿಗೆ ಪ್ರಮಾಣ ತಗ್ಗಿಸುವ ಬಗ್ಗೆ ಚರ್ಚಿಸಲು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಶನಿವಾರ ಸಭೆ ಸೇರಲಿದೆ.

ಪಿಪಿಇ ಕಿಟ್‌ಗಳು, ಮುಖಗವಸು, ಲಸಿಕೆ ಸೇರಿದಂತೆ ಕೋವಿಡ್‌ ನಿರ್ವಹಣೆಗೆ ಅಗತ್ಯವಿರುವ ವಸ್ತುಗಳ ಮೇಲಿನ ತೆರಿಗೆ ಪ್ರಮಾಣ ತಗ್ಗಿಸುವ ಬಗ್ಗೆ ಪರಿಶೀಲಿಸಿ, ಶಿಫಾರಸು ಮಾಡಲು ಸಚಿವರ ಸಮಿತಿಯೊಂದನ್ನು ಮೇ 28ರಂದು ನಡೆದ ಜಿಎಸ್‌ಟಿ ಮಂಡಳಿ ಸಭೆಯು ರಚಿಸಿತ್ತು. ಸಚಿವರ ಸಮಿತಿಯು ಈಚೆಗೆ ವರದಿ ಸಲ್ಲಿಸಿದೆ.

ವರದಿಯ ಬಗ್ಗೆ ಚರ್ಚಿಸಿ, ತೆರಿಗೆ ಪ್ರಮಾಣ ತಗ್ಗಿಸುವ ಬಗ್ಗೆ ‍ಪರಿಶೀಲನೆ ನಡೆಸಲು ಜಿಎಸ್‌ಟಿ ಮಂಡಳಿಯು ಶನಿವಾರ ಸಭೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೆರಿಗೆ ಪ್ರಮಾಣವನ್ನು ತಗ್ಗಿಸಬೇಕು ಎಂದು ಸಮಿತಿಯ ಭಾಗವಾಗಿದ್ದ ಕೆಲವು ರಾಜ್ಯಗಳ ಹಣಕಾಸು ಸಚಿವರು ಸಲಹೆ ಮಾಡಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

ವೈದ್ಯಕೀಯ ಆಮ್ಲಜನಕ, ಪಲ್ಸ್‌ ಆಕ್ಸಿಮೀಟರ್, ಸ್ಯಾನಿಟೈಸರ್, ಆಮ್ಲಜನಕದ ಕಾನ್ಸನ್‌ಟ್ರೇಟರ್‌, ವೆಂಟಿಲೇಟರ್, ಪಿ‍‍‍ಪಿಇ ಕಿಟ್, ಎನ್‌–95 ಮುಖಗವಸು ಇತ್ಯಾದಿಗಳಿಗೆ ತೆರಿಗೆ ಪ್ರಮಾಣ ತಗ್ಗಿಸಬೇಕೇ ಅಥವಾ ಅವುಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಬೇಕೇ ಎಂಬುದನ್ನು ಪರಿಶೀಲಿಸಲು ಸಚಿವರ ಸಮಿತಿಗೆ ಸೂಚಿಸಲಾಗಿದೆ.

ಮೇ 28ರಂದು ನಡೆದ ಜಿಎಸ್‌ಟಿ ಮಂಡಳಿ ಸಭೆಯು ಕಪ್ಪು ಶಿಲೀಂಧ್ರದ ಚಿಕಿತ್ಸೆಗೆ ಬಳಸುವ ಆ್ಯಂಫೊಟೆರಿಸಿನ್‌–ಬಿ ಔಷಧಕ್ಕೆ ಜಿಎಸ್‌ಟಿ ವಿನಾಯಿತಿ ನೀಡಲು ತೀರ್ಮಾನಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.