ಜಿಎಸ್‌ಟಿ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ನಿಯಮಗಳನ್ನು ಜಾರಿಗೆ ತರುವಾಗ ಸೂಕ್ಷ್ಮಗ್ರಾಹಿತ್ವದ ಅಗತ್ಯವೂ ಇದೆ ಎಂದು ಎಸ್‌ಬಿಐ ರಿಸರ್ಚ್ ಹೇಳಿದೆ.
ಕರ್ನಾಟಕದಲ್ಲಿ ಕೆಲವು ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯು ನೀಡಿರುವ ನೋಟಿಸ್ ವಿವಾದದ ಸ್ವರೂಪ ಪಡೆದಿರುವ ಹಾಗೂ ಕೆಲವು ವ್ಯಾಪಾರಿಗಳು ಯುಪಿಐ ಪಾವತಿ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ವರದಿಗಳು ಇರುವ ಈ ಹೊತ್ತಿನಲ್ಲಿ ಎಸ್‌ಬಿಐ ರಿಸರ್ಚ್‌ನ ಮಾತುಗಳು ಮಹತ್ವ ಪಡೆದಿವೆ.
ಯುಪಿಐ ವ್ಯವಸ್ಥೆಯ ಮೂಲಕ ನಡೆದಿರುವ ವಹಿವಾಟುಗಳ ಆಧಾರದಲ್ಲಿ ತೀರಾ ಬಲವಂತದ ಮಾರ್ಗ ಅನುಸರಿಸಿ ಪರಿಶೀಲನೆ ನಡೆಸುವುದರಿಂದ ಸಣ್ಣ ಉದ್ದಿಮೆಗಳನ್ನು ನಡೆಸುವವರು ನಗದನ್ನು ಮಾತ್ರ ಸ್ವೀಕರಿಸುವ ಅಸಂಘಟಿತ ವ್ಯವಸ್ಥೆಗೆ ಮರಳುವ ಸಾಧ್ಯತೆ ಇರುತ್ತದೆ ಎಂದು ಅದು ಹೇಳಿದೆ.
ಪರೋಕ್ಷ ತೆರಿಗೆ ಪದ್ಧತಿಯು ಹೆಚ್ಚಿನ ಉತ್ತರದಾಯಿತ್ವಕ್ಕೆ ಮತ್ತು ಹೆಚ್ಚಿನ ವರಮಾನ ಸೃಷ್ಟಿಗೆ ಬುನಾದಿ ಹಾಕಿಕೊಟ್ಟಿದೆ. ಆದರೆ ಸಣ್ಣ ವರ್ತಕರಿಗೆ ದಂಡ ವಿಧಿಸುವ ಬದಲು, ಅವರ ಬಲವನ್ನು ಹೆಚ್ಚಿಸುವುದರ ಮೇಲೆ ಈ ವ್ಯವಸ್ಥೆಯ ದೀರ್ಘಾವಧಿ ಯಶಸ್ಸು ನಿಂತಿದೆ ಎಂದು ಎಸ್‌ಬಿಐ ರಿಸರ್ಚ್‌ನ ವರದಿಯು ಹೇಳಿದೆ.
ಬೆಂಗಳೂರಿನ ಹಲವು ಅಂಗಡಿಗಳ ಮಾಲೀಕರು ಹಾಗೂ ವರ್ತಕರಿಗೆ ಅವರ ವಹಿವಾಟಿನ ಗಾತ್ರಕ್ಕಿಂತ ಹೆಚ್ಚಿನ ಪ್ರಮಾಣದ ತೆರಿಗೆ ನೋಟಿಸ್ ನೀಡಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಆರ್ಥಿಕ ಚಟುವಟಿಕೆಗಳ ಹೆಚ್ಚು ನಿಖರವಾದ ಚಿತ್ರಣವನ್ನು ಕಾಣುವ ಹಾಗೂ ತೆರಿಗೆ ವಂಚನೆಯನ್ನು ಕಡಿಮೆ ಮಾಡುವ ಉದ್ದೇಶವು ಒಳ್ಳೆಯದು. ಆದರೆ ಈ ಕೆಲಸವನ್ನು ಮಾಡುವಾಗ ಸೂಕ್ಷ್ಮಗ್ರಾಹಿತ್ವ ಬೇಕು’ ಎಂದು ಅದು ಕಿವಿಮಾತು ಹೇಳಿದೆ.
‘ಅತಿಯಾದ ಬಲವಂತದ ಕ್ರಮಗಳ ಮೂಲಕ ನಡೆಯುವ ಪರಿಶೀಲನೆಯ ಪರಿಣಾಮವಾಗಿ ಸಣ್ಣ ಉದ್ದಿಮೆಗಳು ನಗದು ಆಧಾರಿತವಾದ ಪಾವತಿ ವ್ಯವಸ್ಥೆಗೆ ಮರಳಬಹುದು. ಹಾಗೆ ಆದರೆ, ಹಣಕಾಸಿನ ವಹಿವಾಟುಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯೊಳಕ್ಕೆ ತರಬೇಕು ಎಂಬ ಉದ್ದೇಶಕ್ಕೇ ಸೋಲಾಗುತ್ತದೆ’ ಎಂದು ಕೂಡ ವರದಿಯು ಎಚ್ಚರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.