ADVERTISEMENT

₹ 224 ಕೋಟಿ ಜಿಎಸ್‌ಟಿ ವಂಚನೆ ಪತ್ತೆ: ಶಂಕಿತ ಆರೋಪಿ ಬಂಧನ

ಪಿಟಿಐ
Published 13 ಮಾರ್ಚ್ 2019, 19:58 IST
Last Updated 13 ಮಾರ್ಚ್ 2019, 19:58 IST
   

ಹೈದರಾಬಾದ್‌: ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿಎಸ್‌ಟಿ) ₹ 224 ಕೋಟಿ ಮೊತ್ತದ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

8 ಕಂಪನಿಗಳು ₹ 1,289 ಕೋಟಿ ಮೌಲ್ಯದ ನಕಲಿ ಇನ್‌ವಾಯ್ಸ್‌ ಸೃಷ್ಟಿಸುವ ಮೂಲಕ ₹ 224 ಕೋಟಿ ಜಿಎಸ್‌ಟಿ ವಂಚನೆ ನಡೆಸಿವೆ ಎಂದು ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ.

ವಂಚನೆಯಲ್ಲಿ ಭಾಗಿಯಾಗಿರುವ ಪ್ರಮುಖ ಶಂಕಿತ ಆರೋಪಿಯನ್ನು ಬಂಧಿಸಲಾಗಿದ್ದು, ಆತನಿಂದ ₹ 19.75 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು ಹೈದರಾಬಾದ್‌ನ ಕೇಂದ್ರೀಯ ಜಿಎಸ್‌ಟಿ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಈ ಕಂಪನಿಗಳು ಕಬ್ಬಿಣ ಮತ್ತು ಉಕ್ಕು ಉತ್ಪನ್ನಗಳ ಮಾರಾಟದಲ್ಲಿ ತೊಡಗಿಕೊಂಡಿವೆ.ಕಂಪನಿಗಳ ವಹಿವಾಟು ಕಚೇರಿಗಳು ಮತ್ತು ವಸತಿ ಪ್ರದೇಶಗಳಲ್ಲಿಮಂಗಳವಾರ ರಾತ್ರಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಹಲವು ದಾಖಲೆಪತ್ರಗಳನ್ನೂ ವಶಕ್ಕೆ ಪ‍ಡೆಯಲಾಗಿದೆ.

2017ರ ಜುಲೈನಿಂದಟಿಎಂಟಿ ಬಾರ್‌, ಎಂಎಸ್‌ ಬಾರ್‌, ಎಂಎಸ್‌ ಫ್ಲ್ಯಾಟ್‌ ಉತ್ಪನ್ನಗಳ ಮಾರಾಟದ ನಕಲಿ ಇನ್‌ವಾಯ್ಸ್‌ ಸೃಷ್ಟಿಸಿ, ಕಂಪನಿಯಲ್ಲಿರುವ ಇತರ ತೆರಿಗೆ ಪಾವತಿದಾರರಿಗೆ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಾವತಿಯಾಗುವಂತೆ ಮಾಡಲಾಗುತ್ತಿತ್ತು.

₹ 1,289 ಕೋಟಿ ಮೌಲ್ಯದ ನಕಲಿ ಇನ್‌ವಾಯ್ಸ್‌ ಸೃಷ್ಟಿಸಿ, ₹ 224 ಕೋಟಿಗಳಷ್ಟು ಇನ್‌ಪುಟ್‌ ಟ್ಯಾಕ್ಸ್ ಕ್ರೆಡಿಟ್‌ ವಂಚಿಸಲಾಗಿದೆ.

ಇವರಲ್ಲಿ ಕೆಲವು ತೆರಿಗೆಪಾವತಿದಾರರು ಒಂದೇ ವಿಳಾಸದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ವಂಚಕರೇ ಈ 8 ಕಂಪನಿಗಳನಿರ್ದೇಶಕರು/ಪಾಲುದಾರರು/ಪ್ರವರ್ತಕರ ಹುದ್ದೆಯಲ್ಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಕಂಪನಿಗಳು ನಕಲಿ ವ್ಯಾಪಾರ ಮತ್ತು ವಹಿವಾಟಿನ ಸುತ್ತೋಲೆಗಳನ್ನು ಹೊರಡಿಸುವುದರಲ್ಲಿ ಹಾಗೂ ಅಂತಹ ನಕಲಿ ಇನ್‌ವಾಯ್ಸ್‌ ಮತ್ತು ಇ–ವೇ ಬಿಲ್‌ಗಳನ್ನು ಬೇರೆಯವರಿಗೆ ಪೂರೈಸುವ ಮೂಲಕವೂ ವಂಚನೆ ಎಸಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಸುರಕ್ಷತೆ ಇಲ್ಲದೆ, ಸಾಲ ಖಾತರಿ ಪತ್ರ ಪಡೆಯಲು ಬ್ಯಾಂಕ್‌ಗಳನ್ನು ವಂಚಿಸುವ ವ್ಯವಸ್ಥೆಯನ್ನೂ ರೂಪಿಸಿಕೊಂಡಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಸಭೆಗೆ ಚುನಾವಣಾ ಆಯೋಗ ಅನುಮತಿ
ನವದೆಹಲಿ (ಪಿಟಿಐ):
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಪೂರ್ವನಿರ್ಧರಿತ 34ನೇ ಸಭೆಗೆ ಚುನಾವಣಾ ಆಯೋಗವು ಅನುಮತಿ ನೀಡಿದೆ.

ಇದೇ 19ರಂದುವಿಡಿಯೊ ಕಾನ್ಫರೆನ್ಸ್‌ ಮೂಲಕ ಜಿಎಸ್‌ಟಿ ಮಂಡಳಿ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ರಿಯಲ್‌ ಎಸ್ಟೇಟ್‌ ವಲಯದ ಮೇಲಿನ ತೆರಿಗೆ ದರ ಇಳಿಕೆಯೂ ಸೇರಿದಂತೆ ಇನ್ನೂ ಹಲವು ವಿಷಯಗಳನ್ನು ಮಂಡಳಿ ಪರಿಗಣನೆಗೆ ತೆಗೆದುಕೊಳ್ಳಲಿದೆ. ಸಭೆ ನಡೆಸುವ ಕುರಿತು ಜಿಎಸ್‌ಟಿ ಮಂಡಳಿಯ ಆಡಳಿತ ಕಚೇರಿಯು ರಾಜ್ಯಗಳಿಗೆ ಸೂಚನೆ ನೀಡಿದೆ. ಫೆಬ್ರುವರಿ ತಿಂಗಳ ಜಿಎಸ್‌ಟಿ ಸಂಗ್ರಹ ₹ 97,247 ಕೋಟಿಗೆ ಇಳಿಕೆಯಾಗಿದೆ. ಜನವರಿಯಲ್ಲಿ ₹ 1.02 ಲಕ್ಷ ಕೋಟಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.