ADVERTISEMENT

ರಿಯಾಲ್ಟಿ: ಹೊಸ ಜಿಎಸ್‌ಟಿಗೆ ಸಮ್ಮತಿ

ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ಕಾಲಾವಕಾಶ ನೀಡಲು ಮಂಡಳಿ ಅನುಮೋದನೆ

ಪಿಟಿಐ
Published 19 ಮಾರ್ಚ್ 2019, 18:20 IST
Last Updated 19 ಮಾರ್ಚ್ 2019, 18:20 IST
   

ನವದೆಹಲಿ: ಗೃಹ ನಿರ್ಮಾಣ ಯೋಜನೆಗಳಿಗೆ ಸಂಬಂಧಿಸಿದಂತೆ ಹೊಸ ಸ್ವರೂಪದ ಜಿಎಸ್‌ಟಿ ವ್ಯವಸ್ಥೆ ಅಳವಡಿಸಿಕೊಳ್ಳುವ ಬದಲಾವಣೆ ಯೋಜನೆಗೆ ಸರಕು ಮತ್ತು ಸೇವಾ ತೆರಿಗೆ ಮಂಡಳಿಯು ಅನುಮೋದನೆ ನೀಡಿದೆ.

ಮಾರ್ಚ್‌ ಅಂತ್ಯದ ವೇಳೆಗೆ ಪೂರ್ಣಗೊಂಡಿರದ ಗೃಹ ನಿರ್ಮಾಣ ಯೋಜನೆಗಳ ರಿಯಲ್‌ ಎಸ್ಟೇಟ್‌ ಸಂಸ್ಥೆಗಳು, ಹಳೆಯ ವ್ಯವಸ್ಥೆಯಾದ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ಅಥವಾ ಐಟಿಸಿ ಇಲ್ಲದ ಶೇ 5 ಮತ್ತು ಶೇ 1ರಷ್ಟು ಜಿಎಸ್‌ಟಿಯ ಹೊಸ ವ್ಯವಸ್ಥೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದೆ.

ನಿರ್ಮಾಣ ಹಂತದಲ್ಲಿ ಇರುವ ವಸತಿ ಯೋಜನೆಗಳ ಜಿಎಸ್‌ಟಿಯನ್ನು ಶೇ 12 ರಿಂದ ಶೇ 5ಕ್ಕೆ ಮತ್ತು ಕೈಗೆಟುಕುವ ಯೋಜನೆಗಳಿಗೆ ವಿಧಿಸಲಾಗುತ್ತಿದ್ದ ಶೇ 8ರಷ್ಟು ಜಿಎಸ್‌ಟಿಯನ್ನು ಶೇ 1ರಷ್ಟಕ್ಕೆ ಇಳಿಸಲಾಗಿದೆ. ಫೆಬ್ರುವರಿ ತಿಂಗಳಲ್ಲಿ ನಡೆದಿದ್ದ ಸಭೆಯಲ್ಲಿ ಜಿಎಸ್‌ಟಿ ಮಂಡಳಿಯು ಈ ನಿರ್ಧಾರ ಕೈಗೊಂಡಿತ್ತು. ಹೊಸ ದರಗಳು ಇದೇ ಏಪ್ರಿಲ್‌ 1ರಿಂದ ಜಾರಿಗೆ ಬರಲಿವೆ.

ADVERTISEMENT

‘ಹೊಸ ತೆರಿಗೆ ವ್ಯವಸ್ಥೆಗೆ ಬದಲಾಗುವ ಯೋಜನೆಗೆ ಮಂಡಳಿಯು ಸಮ್ಮತಿ ನೀಡಿದೆ. ಎರಡು ಯೋಜನೆಗಳ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಲು ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ಸಮಯಾವಕಾಶ ನೀಡಲಾಗುವುದು’ ಎಂದು ರೆವಿನ್ಯೂ ಕಾರ್ಯದರ್ಶಿ ಎ. ಬಿ. ಪಾಂಡೆ ಹೇಳಿದ್ದಾರೆ. ಜಿಎಸ್‌ಟಿ ಮಂಡಳಿಯ 34ನೆ ಸಭೆಯ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ವಹಿಸಿದ್ದರು.

ಹೊಸ ವ್ಯವಸ್ಥೆಗೆ ಬದಲಾಗಲು ರಿಯಲ್‌ ಎಸ್ಟೇಟ್‌ ಸಂಸ್ಥೆಗಳಿಗೆ ಸೂಕ್ತ ಸಮಯಾವಕಾಶ ನೀಡಲು ಮಂಡಳಿಯು ಸಮ್ಮತಿಸಿದೆ. ರಾಜ್ಯ ಸರ್ಕಾರಗಳ ಜತೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು. ಈ ಸಮಯಾವಕಾಶವು 15 ದಿನದಿಂದ 1 ತಿಂಗಳವರೆಗೆ ಇರಲಿದೆ.

ಬೆಲೆ ಹೆಚ್ಚಳ?: ಹೊಸ ತೆರಿಗೆ ಸ್ವರೂಪದಿಂದಾಗಿ ಮನೆಗಳ ಬೆಲೆ ಹೆಚ್ಚಳಗೊಳ್ಳುವ ಸಾಧ್ಯತೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಜೈನ್‌, ‘ಅಂತಹ ಪ್ರಕರಣಗಳಲ್ಲಿ ಲಾಭಕೋರತನ ತಡೆ ರಾಷ್ಟ್ರೀಯ ಪ್ರಾಧಿಕಾರವು ಕ್ರಮ ಕೈಗೊಳ್ಳಲಿದೆ’ ಎಂದು ಹೇಳಿದ್ದಾರೆ.

‘ಹೊಸ ವ್ಯವಸ್ಥೆಗೆ ಬದಲಾಗುವುದಕ್ಕೆ ಸಂಬಂಧಿಸಿದಂತೆ ಮಂಡಳಿಯ ನಿರ್ಧಾರವು ರಿಯಲ್‌ ಎಸ್ಟೇಟ್‌ ವಲಯಕ್ಕೆ ನೆಮ್ಮದಿ ನೀಡಲಿದೆ’ ಎಂದು ಇವೈ ಇಂಡಿಯಾದ ಪಾಲುದಾರ ಅಭಿಷೇಕ್‌ ಜೈನ್‌ ಹೇಳಿದ್ದಾರೆ.

‘ನಿರ್ಮಾಣ ಹಂತದಲ್ಲಿ ಇರುವ ಯೋಜನೆಗಳನ್ನು ಹೊಸ ಯೋಜನೆಗಳಿಂದ ಬೇರ್ಪಡಿಸುವ ನಿರ್ಧಾರವು ಇನ್‌ಪುಟ್‌ ಟ್ಯಾಕ್ಸ್ ಕ್ರೆಡಿಟ್‌ ನಷ್ಟಕ್ಕೆ ಒಳಗಾಗುವ ಕಟ್ಟಡ ನಿರ್ಮಾಣಗಾರರಿಗೆ ನೆಮ್ಮದಿ ನೀಡಲಿದೆ’ ಎಂದು ಡೆಲೊಯ್ಟ್‌ ಇಂಡಿಯಾದ ಪಾಲುದಾರ ಎಂ. ಎಸ್‌. ಮಣಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.