ADVERTISEMENT

ದಿನನಿತ್ಯ ಬಳಕೆಯ 175 ಉತ್ಪನ್ನಗಳ ತೆರಿಗೆ ಇಳಿಕೆ? ಮಾಹಿತಿ ಇಲ್ಲಿದೆ..

ಶಾಂಪೂ, ಎಲೆಕ್ಟ್ರಾನಿಕ್ಸ್ ಉಪಕರಣಗಳ ಮೇಲಿನ ಜಿಎಸ್‌ಟಿ ತಗ್ಗಿಸಲು ಸರ್ಕಾರ ಚಿಂತನೆ

ರಾಯಿಟರ್ಸ್
Published 2 ಸೆಪ್ಟೆಂಬರ್ 2025, 4:08 IST
Last Updated 2 ಸೆಪ್ಟೆಂಬರ್ 2025, 4:08 IST
   

ನವದೆಹಲಿ: ದಿನನಿತ್ಯ ಬಳಕೆ ಮಾಡುವ ಶಾಂಪೂವಿನಿಂದ ಆರಂಭಿಸಿ, ಗ್ರಾಹಕ ಬಳಕೆಯ ಎಲೆಕ್ಟ್ರಾನಿಕ್‌ ಉಪಕರಣಗಳು, ಹೈಬ್ರಿಡ್‌ ಕಾರುಗಳು ಸೇರಿ ಸರಿಸುಮಾರು 175 ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇಕಡ 10ರಷ್ಟು ಕಡಿಮೆ ಮಾಡುವ ಇರಾದೆಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಜಿಎಸ್‌ಟಿ ವ್ಯವಸ್ಥೆಯಲ್ಲಿ ಕೆಲವು ಸುಧಾರಣೆಗಳನ್ನು ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ 15ರಂದು ಹೇಳಿದ್ದಾರೆ.

ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ತೆರಿಗೆ ಪ್ರಮಾಣ ಕಡಿಮೆ ಮಾಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ. ಟಾಲ್ಕಂ ಪೌಡರ್‌, ಟೂತ್‌ಪೇಸ್ಟ್‌, ಶಾಂಪೂಗಳ ಮೇಲಿನ ತೆರಿಗೆ ಪ್ರಮಾಣ ಶೇ 18ರಷ್ಟು ಇರುವುದನ್ನು ಶೇ 5ಕ್ಕೆ ಇಳಿಸುವ ಉಲ್ಲೇಖವು ‍ಈ ಪ್ರಸ್ತಾವದಲ್ಲಿದೆ ಎಂದು ಗೊತ್ತಾಗಿದೆ. ಇದು ಕಾರ್ಯರೂಪಕ್ಕೆ ಬಂದಲ್ಲಿ ಹಿಂದುಸ್ತಾನ್ ಯೂನಿಲಿವರ್ ಮತ್ತು ಗೋದ್ರೆಜ್ ಇಂಡಸ್ಟ್ರೀಸ್‌ನಂತಹ ಕಂಪನಿಗಳ ಮಾರಾಟ ಪ್ರಮಾಣದಲ್ಲಿ ಏರಿಕೆ ಆಗುವ ನಿರೀಕ್ಷೆ ಇದೆ.

ADVERTISEMENT

ಹವಾನಿಯಂತ್ರಕಗಳು ಹಾಗೂ ಟಿ.ವಿ.ಗಳ ಮೇಲಿನ ತೆರಿಗೆ ಪ್ರಮಾಣ ಈಗಿನ ಶೇ 28ರ ಮಟ್ಟದಿಂದ ಶೇ 18ಕ್ಕೆ ಇಳಿಕೆ ಆಗುವ ಸಾಧ್ಯತೆ ಇದೆ. ಈ ವಿಚಾರವಾಗಿ ಕೇಂದ್ರ ಹಣಕಾಸು ಸಚಿವಾಲಯದಿಂದ ತಕ್ಷಣಕ್ಕೆ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್‌ಟಿ ಮಂಡಳಿಯು ಬುಧವಾರ, ಗುರುವಾರ ಸಭೆ ಸೇರಲಿದೆ.

ಅಮೆರಿಕಕ್ಕೆ ಭಾರತದಿಂದ ಆಗುವ ರಫ್ತುಗಳಲ್ಲಿ ಉಂಟಾಗಬಹುದಾದ ಇಳಿಕೆಯ ಪರಿಣಾಮವನ್ನು ನಿಭಾಯಿಸುವ ಉದ್ದೇಶ ಕೂಡ ಜಿಎಸ್‌ಟಿ ತೆರಿಗೆ ಹಂತಗಳ ಇಳಿಕೆ ಪ್ರಸ್ತಾವದ ಹಿಂದಿದೆ ಎಂದು ಮೂಲಗಳು ಹೇಳಿವೆ. ರಫ್ತಾಗುವ ಉತ್ಪನ್ನಗಳಾದ ರಸಗೊಬ್ಬರಗಳು, ಕೃಷಿ ಯಂತ್ರೋಪಕರಣಗಳು ಮತ್ತು ಟ್ರ್ಯಾಕ್ಟರ್‌ಗಳು, ಅವುಗಳ ಬಿಡಿಭಾಗಗಳ ಮೇಲಿನ ತೆರಿಗೆ ಪ್ರಮಾಣವನ್ನು ಈಗಿನ ಶೇ 12 ಅಥವಾ ಶೇ 18ರ ಮಟ್ಟದಿಂದ ಶೇ 5ಕ್ಕೆ ಇಳಿಕೆ ಮಾಡುವ ಚಿಂತನೆಯು ಕೇಂದ್ರ ಸರ್ಕಾರಕ್ಕೆ ಇದೆ.

ತೆರಿಗೆ ಇಳಿಕೆ ಪ್ರಸ್ತಾವ ಹೀಗಿದೆ...

* ಪೆಟ್ರೋಲ್‌ ಹೈಬ್ರಿಡ್‌ ಕಾರುಗಳ ಮೇಲಿನ ತೆರಿಗೆ ಶೇ 28ರಿಂದ ಶೇ 18ಕ್ಕೆ ಇಳಿಸುವ ಚಿಂತನೆ

* 350 ಸಿ.ಸಿ.ಗಿಂತ ಕಡಿಮೆ ಎಂಜಿನ್‌ ಸಾಮರ್ಥ್ಯದ ದ್ವಿಚಕ್ರ ವಾಹನಗಳ ಮೇಲಿನ ತೆರಿಗೆ ತಗ್ಗಿಸುವ ಪ್ರಸ್ತಾವ

* 4 ಮೀಟರ್‌ಗಿಂತ ಹೆಚ್ಚು ಉದ್ದದ ಕಾರುಗಳ ಮೇಲಿನ ತೆರಿಗೆಯನ್ನು ಶೇ 40ಕ್ಕೆ ಹೆಚ್ಚಿಸಿ, ಅವುಗಳ ಮೇಲಿನ ಇತರ ಸೆಸ್‌ಗಳನ್ನು ಕಡಿಮೆ ಮಾಡಿ, ಒಟ್ಟು ತೆರಿಗೆ ಪ್ರಮಾಣವನ್ನು ಶೇ 50ರ ಮಟ್ಟದಲ್ಲಿ ಉಳಿಸಿಕೊಳ್ಳುವ ಆಲೋಚನೆ ಇದೆ

* ಕಲ್ಲಿದ್ದಲು, ಕ್ಯಾಸಿನೊ, ಕುದುರೆ ರೇಸ್ ಮೇಲಿನ ತೆರಿಗೆ ಪ್ರಮಾಣ ಹೆಚ್ಚಳ ಸಾಧ್ಯತೆ

ವಾಹನ ರವಾನೆ ಇಳಿಕೆ

ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ, ಹುಂಡೈ, ಮಹೀಂದ್ರ ಆ್ಯಂಡ್ ಮಹೀಂದ್ರ ಮತ್ತು ಟಾಟಾ ಮೋಟರ್ಸ್‌ ಡೀಲರ್‌ಗಳಿಗೆ ರವಾನಿಸಿದ ವಾಹನಗಳ ಸಂಖ್ಯೆಯು ಆಗಸ್ಟ್‌ನಲ್ಲಿ ಇಳಿಕೆಯಾಗಿದೆ.

ವಾಹನಗಳಿಗೆ ಜಿಎಸ್‌ಟಿ ವ್ಯವಸ್ಥೆಯ ಅಡಿ ಪ್ರಸ್ತುತ ವಿಧಿಸಲಾಗುತ್ತಿರುವ ಶೇ 28ರ ತೆರಿಗೆ ದರ ತಗ್ಗಬಹುದು ಎಂಬ ನಿರೀಕ್ಷೆಯಿಂದ ಬಹುತೇಕ ಖರೀದಿದಾರರು ವಾಹನಗಳ ಖರೀದಿಯನ್ನು ಮುಂದೂಡಿರುವುದು ವಾಹನಗಳ ರವಾನೆ ಕಡಿಮೆಯಾಗಲು ಕಾರಣ ಎನ್ನಲಾಗಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಮಾರುತಿ ಸುಜುಕಿ ಕಂಪನಿಯು ಡೀಲರ್‌ಗಳಿಗೆ 1,43,075 ಪ್ರಯಾಣಿಕ ವಾಹನಗಳನ್ನು ಕಳುಹಿಸಿತ್ತು. ಈ ಬಾರಿ ಅದು 1,31,278 ವಾಹನಗಳನ್ನು ಕಳುಹಿಸಿದ್ದು, ಶೇ 8ರಷ್ಟು ಇಳಿಕೆ ಆಗಿದೆ.

ಹುಂಡೈ ಮೋಟರ್ ಇಂಡಿಯಾದ ರವಾನೆಯಲ್ಲಿ ಶೇ 11ರಷ್ಟು ಇಳಿಕೆಯಾಗಿದ್ದು, 44,001 ವಾಹನ ರವಾನೆ ಆಗಿದೆ. ಮಹೀಂದ್ರ ಆ್ಯಂಡ್ ಮಹೀಂದ್ರ ಮತ್ತು ಟಾಟಾ ಮೋಟರ್ಸ್‌ ಕಡೆಯಿಂದ ಆಗಿರುವ ರವಾನೆಯು ಕ್ರಮವಾಗಿ ಶೇ 9 ಮತ್ತು ಶೇ 7ರಷ್ಟು ಕಡಿಮೆಯಾಗಿದೆ.

ಈಗ ನಾಲ್ಕು ಹಂತಗಳ (ಶೇ 5, ಶೇ 12, ಶೇ 18 ಮತ್ತು ಶೇ 28) ಜಿಎಸ್‌ಟಿ ಇದೆ. ವಾಹನಗಳಿಗೆ ಶೇ 28ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ನಾಲ್ಕು ಹಂತಗಳ ತೆರಿಗೆ ವ್ಯವಸ್ಥೆಯನ್ನು ಎರಡು ಹಂತಗಳಿಗೆ ಇಳಿಸಲಾಗುವುದು ಎಂದು ಹೇಳಿದ್ದಾರೆ. ಹೀಗಾಗಿ ವಾಹನ ಖರೀದಿಸಲು ಖರೀದಿದಾರರು ತಡ ಮಾಡುತ್ತಿದ್ದಾರೆ. ಇದೇ ರವಾನೆ ಪ್ರಮಾಣ ಕಡಿಮೆ ಆಗಲು ಕಾರಣ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.