ADVERTISEMENT

ಸಾಮಾಜಿಕ ಜಾಲತಾಣ ಮೂಲಕ ಉತ್ಪನ್ನಗಳ ಪ್ರಚಾರ: ಶೀಘ್ರದಲ್ಲಿಯೇ ಹೊಸ ಮಾರ್ಗಸೂಚಿ?

ಪಿಟಿಐ
Published 7 ಸೆಪ್ಟೆಂಬರ್ 2022, 15:28 IST
Last Updated 7 ಸೆಪ್ಟೆಂಬರ್ 2022, 15:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಾಮಾಜಿಕ ಜಾಲತಾಣಗಳ ಮೂಲಕ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುವವರಿಗೆ ಅನ್ವಯವಾಗುವ ಕೆಲವು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ರೂಪಿಸಲಿದೆ.

ಮಾರ್ಗಸೂಚಿಗಳು ಜಾರಿಗೆ ಬಂದ ನಂತರದಲ್ಲಿ ಇಂತಹ ವ್ಯಕ್ತಿಗಳು ಯಾವುದಾದರೂ ಉತ್ಪನ್ನದ ಪರ ಮಾತನಾಡುವಾಗ, ಆ ಉತ್ಪನ್ನದ ಜೊತೆ ತಾವು ಹೊಂದಿರುವ ನಂಟು ಯಾವ ಬಗೆಯದ್ದು ಎಂಬುದನ್ನು ಬಹಿರಂಗಪಡಿಸಬೇಕಾಗುತ್ತದೆ.

‘ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಮಾರ್ಗಸೂಚಿಗಳನ್ನು ರೂಪಿಸುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್‌ಸ್ಟಾಗ್ರಾಂನಂತಹ ವೇದಿಕೆಗಳಲ್ಲಿ ಬಹಳಷ್ಟು ಜನ ಬೆಂಬಲಿಗರನ್ನು ಹೊಂದಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಭಾವ ಬೀರುವ ವ್ಯಕ್ತಿಗಳು ಹಣ ಪಡೆದು ಕೆಲವು ಉತ್ಪನ್ನಗಳ ಪರ ಅಭಿಪ್ರಾಯ ವ್ಯಕ್ತಪಡಿಸುವುದಿದೆ.

ADVERTISEMENT

ಹೊಸ ಮಾರ್ಗಸೂಚಿಗಳು ಜಾರಿಗೆ ಬಂದ ನಂತರದಲ್ಲಿ, ಹಣ ಪಡೆದು ಯಾವುದಾದರೂ ಉತ್ಪನ್ನದ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುವುದಿದ್ದರೆ, ಹಾಗೆ ಮಾಡುವವರು ಆ ಉತ್ಪನ್ನದ ಬ್ರ್ಯಾಂಡ್ ಜೊತೆ ತಾವು ಹೊಂದಿರುವ ನಂಟು ಏನು ಎಂಬುದನ್ನು ಬಹಿರಂಗಪಡಿಸಬೇಕಾಗುತ್ತದೆ. ಮಾರ್ಗಸೂಚಿಗಳು ಇನ್ನು ಹದಿನೈದು ದಿನಗಳಲ್ಲಿ ಅಂತಿಮಗೊಳ್ಳುವ ಸಾಧ್ಯತೆ ಇದೆ.

ಅಷ್ಟೇ ಅಲ್ಲ, ಇ–ವಾಣಿಜ್ಯ ವೆಬ್‌ಸೈಟ್‌ಗಳಲ್ಲಿ ನಕಲಿ ರೀವ್ಯೂ ಪ್ರಕಟವಾಗುವುದನ್ನು ತಡೆಯಲು ನಿಯಮಗಳನ್ನು ಸಚಿವಾಲಯ ಅಂತಿಮಗೊಳಿಸಿದೆ. ನಿಯಮಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುತ್ತದೆ ಎಂದು ಗೊತ್ತಾಗಿದೆ.

ನಕಲಿ ರೀವ್ಯೂಗಳ ಪ್ರಭಾವ ಎಷ್ಟಿದೆ ಎಂಬ ಬಗ್ಗೆ ಚರ್ಚಿಸಲು ಇಲಾಖೆಯು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ (ಎಎಸ್‌ಸಿಐ), ಇ–ವಾಣಿಜ್ಯ ಕಂಪನಿಗಳ ಜೊತೆ ಮೇ ತಿಂಗಳಲ್ಲಿ ಸಭೆ ನಡೆಸಿತ್ತು. ನಕಲಿ ರೀವ್ಯೂಗಳು ಗ್ರಾಹಕರನ್ನು ದಾರಿ ತಪ್ಪಿಸುತ್ತವೆ. ಇ–ವಾಣಿಜ್ಯ ವೇದಿಕೆಗಳ ಮೂಲಕ ಉತ್ಪನ್ನಗಳನ್ನು ಖರೀದಿಸುವವರು ರೀವ್ಯೂಗಳನ್ನು ಬಹಳವಾಗಿ ನೆಚ್ಚಿಕೊಂಡಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.