ನವದೆಹಲಿ: ‘ಎಚ್–1ಬಿ ವೀಸಾ ಶುಲ್ಕ ಹೆಚ್ಚಳದ ನಿರ್ಧಾರವು ಅಮೆರಿಕದಲ್ಲಿ ಅನ್ವೇಷಣೆಗಳು ಉಸಿರುಗಟ್ಟುವಂತೆ ಮಾಡಲಿದೆ. ಆದರೆ, ಈ ನಿರ್ಧಾರವು ಭಾರತದ ಅಭಿವೃದ್ಧಿಗೆ ವೇಗ ನೀಡಲಿದೆ’ ಎಂದು ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಶನಿವಾರ ಹೇಳಿದ್ದಾರೆ.
ವೀಸಾ ಶುಲ್ಕ ಹೆಚ್ಚಳವು, ಜಾಗತಿಕ ಪ್ರತಿಭೆಗಳಿಗೆ ಬಾಗಿಲು ಹಾಕುವ ಕೆಲಸ ಮಾಡಲಿದೆ. ಇದರಿಂದ ಅಮೆರಿಕದಲ್ಲಿ ಸ್ಥಾಪನೆಯಾಗಬೇಕಾದ ಪ್ರಯೋಗಾಲಯಗಳು, ಅಲ್ಲಿಗೆ ಸಿಗಬೇಕಾದ ಹಕ್ಕುಸ್ವಾಮ್ಯ, ಅಲ್ಲಿ ಆಗಬೇಕಾದ ಸಂಶೋಧನೆ ಮತ್ತು ಅಲ್ಲಿ ಸ್ಥಾಪನೆ ಆಗಬಹುದಾಗ ನವೋದ್ಯಮಗಳು ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಗುರುಗ್ರಾಮದಂತಹ ನಗರಗಳಿಗೆ ಹೋಗುವಂತೆ ಮಾಡಲಿದೆ ಎಂದು ಹೇಳಿದ್ದಾರೆ.
ಇದರಿಂದಾಗಿ ಭಾರತದ ಅತ್ಯುತ್ತಮ ವೈದ್ಯರು, ಎಂಜಿನಿಯರ್‌ಗಳು, ವಿಜ್ಞಾನಿಗಳು, ನಾವೀನ್ಯಕಾರರು ವಿಕಸಿತ ಭಾರತದ ಗುರಿ ಮತ್ತು ಪ್ರಗತಿಗೆ ಕೊಡುಗೆ ನೀಡಲು ಅವಕಾಶ ಹೊಂದಲಿದ್ದಾರೆ. ಅಮೆರಿಕದ ಈ ನಿರ್ಧಾರವು ಭಾರತಕ್ಕೆ ಲಾಭ ಉಂಟುಮಾಡುತ್ತದೆ ಎಂದು ಅಮಿತಾಭ್ ಕಾಂತ್ ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಅಮೆರಿಕದಲ್ಲಿನ ಭಾರತದ ವೃತ್ತಿಪರರ ಮೇಲೆ ಈ ವೀಸಾ ನಿರ್ಧಾರವು ಹೆಚ್ಚಿನ ಪರಿಣಾಮ ಬೀರಲಿದೆ. ವಲಸೆ ತಗ್ಗಿಸಲು ಎಚ್–1ಬಿ ವೀಸಾದ ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಳ ಮಾಡುವ ನಿರ್ಧಾರಕ್ಕೆ ಶುಕ್ರವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.