ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಗ್ಗಿಸಬೇಕು ಎಂದು ಗ್ರಾಹಕರು ಹೇಳುತ್ತಿರುವುದರಲ್ಲಿ ಅರ್ಥವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಒಪ್ಪಿಕೊಂಡರು. ಇಂಧನದ ಬೆಲೆ ಇಳಿಯಬೇಕು ಎಂದಾದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಸುಂಕ ಮತ್ತು ತೆರಿಗೆಯನ್ನು ಕಡಿಮೆ ಮಾಡಬೇಕು ಎಂದು ಅವರು ಹೇಳಿದರು.
ಮುಕ್ತ ಮಾರುಕಟ್ಟೆಯಲ್ಲಿ ಮಾರಾಟವಾಗುವ ಪೆಟ್ರೋಲ್ ಬೆಲೆಯಲ್ಲಿ ಶೇಕಡ 60ರಷ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಂಕ, ತೆರಿಗೆ ರೂಪದಲ್ಲಿ ಸಂದಾಯವಾಗುತ್ತದೆ. ಡೀಸೆಲ್ ಬೆಲೆಯ ಶೇ 56ರಷ್ಟು ಈ ರೀತಿ ಸಂದಾಯವಾಗುತ್ತದೆ.
ಸುಂಕ ಇಳಿಕೆ ಮಾಡುವಲ್ಲಿ ಮೊದಲ ಹೆಜ್ಜೆಯನ್ನು ಕೇಂದ್ರವೇ ಇರಿಸಲಿದೆಯೇ ಎಂಬ ವಿಚಾರವಾಗಿ ನಿರ್ಮಲಾ ಅವರು ಯಾವುದೇ ಭರವಸೆ ನೀಡಲಿಲ್ಲ. ‘ಗ್ರಾಹಕರ ಪಾಲಿಗೆ ಈ ಬೆಲೆಯು ಒಂದು ಹೊರೆ’ ಎಂದು ನಿರ್ಮಲಾ ಹೇಳಿದರು.
‘ನಾನು ಈ ವಿಚಾರವಾಗಿ ಧರ್ಮಸಂಕಟ ಎಂಬ ಪದ ಬಳಸುತ್ತೇನೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಸುಂಕ ವಿಧಿಸುತ್ತಿರುವುದು ಕೇಂದ್ರ ಮಾತ್ರವೇ ಅಲ್ಲ, ರಾಜ್ಯಗಳೂ ತೆರಿಗೆ ವಿಧಿಸುತ್ತಿವೆ’ ಎಂದು ಅವರು ಹೇಳಿದರು. ಕೇಂದ್ರಕ್ಕೆ ಸುಂಕದ ರೂಪದಲ್ಲಿ ಬರುವ ಹಣದಲ್ಲಿ ಶೇ 41ರಷ್ಟು ಮತ್ತೆ ರಾಜ್ಯಗಳಿಗೇ ಹೋಗುತ್ತದೆ ಎಂದರು.
ಪೆಟ್ರೋಲ್ ಮತ್ತು ಡೀಸೆಲ್‌ಅನ್ನು ಜಿಎಸ್‌ಟಿ ವ್ಯವಸ್ಥೆಯಡಿ ತರುವ ವಿಚಾರದಲ್ಲಿ ತೀರ್ಮಾನವನ್ನು ಜಿಎಸ್‌ಟಿ ಮಂಡಳಿಯೇ ಕೈಗೊಳ್ಳಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.