ADVERTISEMENT

RBI Repo Rate Cut | ರೆಪೊ ಇಳಿಕೆ: ಸಾಲ ಅಗ್ಗ

ಪ್ರಸಕ್ತ ವರ್ಷದಲ್ಲಿ ಮೂರು ಬಾರಿ ದರ ತಗ್ಗಿಸಿದ ಆರ್‌ಬಿಐ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 23:30 IST
Last Updated 6 ಜೂನ್ 2025, 23:30 IST
<div class="paragraphs"><p>ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ</p></div>

ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ

   

–ಪಿಟಿಐ ಚಿತ್ರ

ಮುಂಬೈ: ರೆಪೊ ದರವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶೇಕಡ 0.50ರಷ್ಟು ಕಡಿಮೆ ಮಾಡಿರುವ ಕಾರಣದಿಂದಾಗಿ ಗೃಹಸಾಲ, ವಾಹನ ಸಾಲ ಮತ್ತು ಇತರ ಕೆಲವು ಸಾಲಗಳು ಅಗ್ಗವಾಗುವ ಸಾಧ್ಯತೆ ಇದೆ.

ADVERTISEMENT

ಅರ್ಥ ವ್ಯವಸ್ಥೆಗೆ ಉತ್ತೇಜನ ನೀಡುವ ಉದ್ದೇಶದಿಂದ ಆರ್‌ಬಿಐ, ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್‌) ಶೇಕಡ 1ರಷ್ಟು ಕಡಿಮೆ ಮಾಡಿದೆ.

ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ತಗ್ಗಿಸುವ ತೀರ್ಮಾನವನ್ನು ಶುಕ್ರವಾರ ತೆಗೆದುಕೊಂಡಿತು. ದರ ಇಳಿಕೆಯ ಪರವಾಗಿ ಐದು ಮಂದಿ ಮತ ಚಲಾಯಿಸಿದರು.

ಈ ಇಳಿಕೆಯಿಂದ ರೆಪೊ ದರವು ಶೇ 5.5ಕ್ಕೆ ಬಂದಿದೆ, ಈ ವರ್ಷದಲ್ಲಿ ಆರ್‌ಬಿಐ ರೆಪೊ ದರವನ್ನು ಒಟ್ಟು ಶೇ 1ರಷ್ಟು ಕಡಿಮೆ ಮಾಡಿದಂತಾಗಿದೆ. ಫೆಬ್ರುವರಿ ಮತ್ತು ಏಪ್ರಿಲ್‌ನಲ್ಲಿ ರೆಪೊ ದರವನ್ನು ತಲಾ ಶೇ 0.25ರಷ್ಟು ಕಡಿಮೆ ಮಾಡಲಾಗಿತ್ತು.

ಇದೇ ಸಂದರ್ಭದಲ್ಲಿ ಆರ್‌ಬಿಐ ತನ್ನ ಹಣಕಾಸಿನ ನಿಲುವನ್ನು ಬದಲಾಯಿಸಿದ್ದು, ‘ಹೊಂದಾಣಿಕೆಯ’ ನಿಲುವಿನ ಬದಲು ‘ತಟಸ್ಥ’ ನಿಲುವು ತಳೆದಿದೆ. ಅಂದರೆ, ಮುಂದಿನ ದಿನಗಳಲ್ಲಿ ಲಭ್ಯವಾಗುವ ದತ್ತಾಂಶ ಆಧರಿಸಿ ರೆಪೊ ದರವನ್ನು ಹೆಚ್ಚಿಸುವ ಅಥವಾ ತಗ್ಗಿಸುವ ತೀರ್ಮಾನವನ್ನು ಆರ್‌ಬಿಐ ತೆಗೆದುಕೊಳ್ಳಲಿದೆ. ಆದರೆ, ರೆಪೊ ದರವನ್ನು ಇನ್ನಷ್ಟು ಕಡಿಮೆ ಮಾಡಲು ಹೆಚ್ಚಿನ ಅವಕಾಶ ಇರಲಿಕ್ಕಿಲ್ಲ ಎಂದು ಮಲ್ಹೋತ್ರಾ ಹೇಳಿದ್ದಾರೆ.

ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ರೆಪೊ ದರದಲ್ಲಿನ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆ ಎಂಬುದು ಆರ್‌ಬಿಐನ ನಿರೀಕ್ಷೆ ಎಂದು ಮಲ್ಹೋತ್ರಾ ಹೇಳಿದ್ದಾರೆ.

‘ಆರ್ಥಿಕ ಬೆಳವಣಿಗೆ ದರವನ್ನು ಹೆಚ್ಚಿನ ಮಟ್ಟಕ್ಕೆ ಒಯ್ಯುವ ಉದ್ದೇಶದ ನಡೆಯಾಗಿ ಇಂದಿನ ತೀರ್ಮಾನವನ್ನು ಕಾಣಬೇಕಿದೆ’ ಎಂದು ಅವರು ಹೇಳಿದ್ದಾರೆ. ಆರ್ಥಿಕ ಬೆಳವಣಿಗೆ ದರವು ಶೇ 7ರಿಂದ ಶೇ 8ರಷ್ಟು ಆಗಬೇಕು ಎಂಬ ಮಹತ್ವಾಕಾಂಕ್ಷೆ ಇರುವುದಾಗಿಯೂ ಅವರು ಹೇಳಿದ್ದಾರೆ.

ಮಾರ್ಚ್‌ಗೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ದೇಶದ ಅರ್ಥವ್ಯವಸ್ಥೆಯ ಬೆಳವಣಿಗೆ ದರವು ನಾಲ್ಕು ವರ್ಷಗಳ ಕನಿಷ್ಠ ಮಟ್ಟವಾದ ಶೇ 6.5ಕ್ಕೆ ತಗ್ಗಿದೆ. 

ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 3.16ಕ್ಕೆ ಇಳಿಕೆ ಆಗಿದೆ. ಇದು 2019ರ ಜುಲೈ ನಂತರದ ಅತ್ಯಂತ ಕನಿಷ್ಠ ಪ್ರಮಾಣ. ಈ ಆರ್ಥಿಕ ವರ್ಷದಲ್ಲಿ ಹಣದುಬ್ಬರ ಪ್ರಮಾಣ ಕಡಿಮೆ ಇರುವ ಅಂದಾಜು ಮಾಡಿರುವ ಆರ್‌ಬಿಐ, ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಿದೆ.

ನಿರೀಕ್ಷೆ ಏನು?

  • ಗೃಹ ಸಾಲ ತುಸು ಅಗ್ಗವಾಗುವುದರಿಂದ ಮನೆಗಳ ಖರೀದಿ ಹೆಚ್ಚಬಹುದು ಮನೆ ನಿರ್ಮಾಣ ಚಟುವಟಿಕೆ ಜಾಸ್ತಿ ಆಗಬಹುದು. ಅಲ್ಲದೆ ಮಧ್ಯಮ ಹಾಗೂ ಪ್ರೀಮಿಯಂ ವರ್ಗದ ಮನೆಗಳಿಗೆ ಬೇಡಿಕೆ ಜಾಸ್ತಿ ಆಗಬಹುದು. * ಸಾಲವು ತುಸು ಅಗ್ಗವಾಗಲಿರುವ ಕಾರಣಕ್ಕೆ ಬಂಡವಾಳ ವೆಚ್ಚವನ್ನು ಹೆಚ್ಚಿಸುವುದಕ್ಕೆ ಉದ್ಯಮ ವಲಯಕ್ಕೆ ಒಂದು ಸ್ಪಷ್ಟ ಸಂದೇಶ ನೀಡಿದಂತೆ ಆಗಿದೆ.

  • ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ಬಜೆಟ್‌ನಲ್ಲಿ ಹೆಚ್ಚಿಸಲಾಗಿದ್ದು ಅದು ಜಾರಿಗೆ ಬಂದಿದೆ. ಈ ಕ್ರಮವು ನಗರ ‍ಪ್ರದೇಶಗಳಲ್ಲಿ ಬೇಡಿಕೆಯನ್ನು ಹೆಚ್ಚಿಸಿದೆ ಎಂಬ ಅಂದಾಜು ಇದೆ. ಈಗ ರೆಪೊ ದರ ಇಳಿಕೆಯ ಕ್ರಮವು ಬೇಡಿಕೆ ಹೆಚ್ಚಿಸುವುದಕ್ಕೆ ಇನ್ನಷ್ಟು ಉತ್ತೇಜನ ನೀಡಲಿದೆ ಎಂಬುದು ತಜ್ಞರ ಲೆಕ್ಕಾಚಾರ. ರೆಪೊ ಇಳಿಕೆಗೆ ಆರ್‌ಬಿಐ ನೀಡಿದ ಕಾರಣಗಳು

  • ಹಣದುಬ್ಬರ ಪ್ರಮಾಣವು ಕಳೆದ ಆರು ತಿಂಗಳಲ್ಲಿ ಗಮನಾರ್ಹವಾಗಿ ತಗ್ಗಿದೆ. ಅದು ಈಗ ನಿಗದಿತ ಮಟ್ಟದ ಒಳಗೆಯೇ ಇದೆ. ಹಣದುಬ್ಬರ ಪ್ರಮಾಣವು 2025–26ರಲ್ಲಿ ಶೇ 3.7ರಷ್ಟು ಇರುವ ಅಂದಾಜು ಇದೆ.

  • ಆರ್ಥಿಕ ಬೆಳವಣಿಗೆಯು ಗುರಿಗಿಂತ ಕಡಿಮೆ ಮಟ್ಟದಲ್ಲಿದೆ. ಜಾಗತಿಕ ಮಟ್ಟದಲ್ಲಿ ಸವಾಲಿನ ಪರಿಸ್ಥಿತಿ ಇದೆ ಅನಿಶ್ಚಿತತೆಯೂ ಹೆಚ್ಚಾಗಿದೆ.

  • ಹೀಗಾಗಿ ದೇಶದಲ್ಲಿ ಬೇಡಿಕೆಯನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ಗ್ರಾಹಕರಿಗೆ ಅನುಕೂಲ
ರೆಪೊ ದರ ಇಳಿಕೆಯ ಪ್ರಯೋಜನವನ್ನು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಪೂರ್ತಿಯಾಗಿ ವರ್ಗಾಯಿಸಿದರೆ ಗೃಹ ವಾಹನ ಮತ್ತು ವೈಯಕ್ತಿಕ ಸಾಲದ ಮರುಪಾವತಿ ಕಂತುಗಳು ತುಸು ಕಡಿಮೆ ಆಗಲಿವೆ.  ಆದರೆ ಎಲ್ಲ ಸಂದರ್ಭಗಳಲ್ಲಿಯೂ ಕಂತುಗಳ ಮೊತ್ತವು ಕಡಿಮೆ ಆಗಬೇಕು ಎಂದೇನೂ ಇಲ್ಲ. ರೆಪೊ ದರವು ತಗ್ಗಿದಾಗ ಕೆಲವು ಬ್ಯಾಂಕ್‌ಗಳು ಗ್ರಾಹಕರಿಗೆ ಎರಡು ಆಯ್ಕೆಗಳನ್ನು ನೀಡುತ್ತವೆ. ಇಎಂಐ (ಕಂತು) ಮೊತ್ತವನ್ನು ಕಡಿಮೆ ಮಾಡಿಕೊಳ್ಳುವುದು ಒಂದು ಆಯ್ಕೆ. ಇಎಂಐ ಮೊತ್ತವನ್ನು ಹಾಗೆಯೇ ಇರಿಸಿಕೊಂಡು ಕಂತುಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುವುದು ಇನ್ನೊಂದು ಆಯ್ಕೆ. ಗ್ರಾಹಕರು ತಮಗೆ ಅನುಕೂಲ ಆಗುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಮೊದಲ ಆಯ್ಕೆಯ ಮೊರೆ ಹೋದವರಿಗೆ ಇಎಂಐ ಮೊತ್ತ ಇಳಿಕೆ ಆಗುತ್ತದೆ. ಎರಡನೆಯ ಆಯ್ಕೆಯನ್ನು ಒಪ್ಪಿದವರಿಗೆ ಇಎಂಐ ಮೊತ್ತ ಹಾಗೆಯೇ ಉಳಿದರೂ ಅವರ ಸಾಲವು ತುಸು ಬೇಗನೆ ಮರುಪಾವತಿ ಆಗುತ್ತದೆ.

ಚಿನ್ನದ ಮೇಲೆ ಹೆಚ್ಚು ಸಾಲ

ಮುಂಬೈ: ಚಿನ್ನವನ್ನು ಅಡಮಾನವಾಗಿ ಇರಿಸಿಕೊಂಡು ನೀಡುವ ಸಾಲದ ಪ್ರಮಾಣವನ್ನು (ಎಲ್‌ಟಿವಿ) ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶೇಕಡ 85ಕ್ಕೆ ಹೆಚ್ಚಿಸಲಿದೆ.

₹2.5 ಲಕ್ಷದವರೆಗಿನ ಸಾಲಗಳಿಗೆ ಇದು ಅನ್ವಯವಾಗಲಿದೆ. ಈಗಿರುವ ನಿಯಮಗಳ ಪ್ರಕಾರ ಅಡಮಾನವಾಗಿ ಇರಿಸಿದ ಚಿನ್ನದ ಶೇ 75ರಷ್ಟು ಮೌಲ್ಯವನ್ನು ಸಾಲದ ರೂಪದಲ್ಲಿ ನೀಡಲಾಗುತ್ತಿದೆ. ಪ್ರಮಾಣವನ್ನು ಹೆಚ್ಚು ಮಾಡಿರುವುದರ ಜೊತೆಗೆ ಒಂದಿಷ್ಟು ಷರತ್ತುಗಳು ಕೂಡ ಇರಲಿವೆ.

ಸಾಲದ ಅಸಲು ಮತ್ತು ಬಡ್ಡಿಯ ಮೊತ್ತವನ್ನು ಸೇರಿಸಿ ಎಲ್‌ಟಿವಿ ಲೆಕ್ಕ ಹಾಕಲಾಗುತ್ತದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದ್ದಾರೆ. ಈಗ ಎಲ್‌ಟಿವಿ ಲೆಕ್ಕಹಾಕುವಾಗ ಅಸಲನ್ನು ಮಾತ್ರ ಪರಿಗಣಿಸಲಾಗುತ್ತಿದೆ. ‘ಎಲ್‌ಟಿವಿ ಇದುವರೆಗೆ ಶೇ 75 ಆಗಿತ್ತು. ಇದನ್ನು ₹2.5 ಲಕ್ಷದವರೆಗಿನ ಸಣ್ಣ ಸಾಲಗಳಿಗೆ ನಾವು ಶೇ 85ಕ್ಕೆ ಹೆಚ್ಚು ಮಾಡುತ್ತಿದ್ದೇವೆ’ ಎಂದು ಮಲ್ಹೋತ್ರಾ ಹೇಳಿದ್ದಾರೆ.

ಚಿನ್ನವನ್ನು ಆಧಾರವಾಗಿ ಇರಿಸಿಕೊಂಡು ನೀಡುವ ಸಾಲಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಇದನ್ನು ಸೇರಿಸಲಾಗುತ್ತದೆ ಎಂದಿದ್ದಾರೆ. ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳು ಎಲ್‌ಟಿವಿ ಲೆಕ್ಕ ಹಾಕುವಾಗ ಅಸಲು ಮತ್ತು ಬಡ್ಡಿಯನ್ನು ಸೇರಿಸುತ್ತಿವೆ. ಆದರೆ ಕೆಲವು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಸಣ್ಣ ಬ್ಯಾಂಕ್‌ಗಳು ಎಲ್‌ಟಿವಿ ಮೊತ್ತವನ್ನು ಶೇ 88ರವರೆಗೂ ಹಿಗ್ಗಿಸುತ್ತಿವೆ ಎಂದು ಮಲ್ಹೋತ್ರಾ ತಿಳಿಸಿದ್ದಾರೆ.

ಚಿನ್ನವನ್ನು ಆಧರಿಸಿದ ಸಾಲಕ್ಕೆ ಸಂಬಂಧಿಸಿದ ಹೊಸ ನಿಯಮಗಳು ಚಿನ್ನದ ಮಾಲೀಕತ್ವದ ಬಗ್ಗೆಯೂ ಕೆಲವು ಸ್ಪಷ್ಟನೆಗಳನ್ನು ನೀಡಲಿವೆ. ಸಾಲ ಪಡೆಯುವ ವ್ಯಕ್ತಿಗೆ ಚಿನ್ನ ಖರೀದಿಸಿದ ರಸೀದಿಗಳನ್ನು ಒದಗಿಸಲು ಸಾಧ್ಯವಾಗದೆ ಇದ್ದರೆ ಅವರಿಗೆ ಸ್ವಯಂ–ಘೋಷಣೆ ಸಲ್ಲಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ. ಚಿನ್ನವನ್ನು ಅಡಮಾನವಾಗಿ ಇರಿಸಿ ₹2.5 ಲಕ್ಷದವರೆಗೆ ಸಾಲ ಪಡೆಯುವುದಿದ್ದರೆ ಸಾಲ ಪಡೆಯುವವರ ಅರ್ಹತೆಯನ್ನು ನಿರ್ಣಯಿಸುವ ಪ್ರಕ್ರಿಯೆಯು ಇಲ್ಲವಾಗಲಿದೆ.

ಸಿಆರ್‌ಆರ್‌ ಇಳಿಕೆ ಹೆಚ್ಚು ನಗದು

ಮುಂಬೈ: ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್‌) ಶೇಕಡ 1ರಷ್ಟು ಕಡಿಮೆ ಮಾಡಲು ಆರ್‌ಬಿಐ ತೀರ್ಮಾನಿಸಿರುವ ಪರಿಣಾಮವಾಗಿ ಅರ್ಥ ವ್ಯವಸ್ಥೆಯ ಉತ್ಪಾದಕ ವಲಯಗಳಿಗೆ ಸಾಲವಾಗಿ ನೀಡಲು ಬ್ಯಾಂಕ್‌ಗಳಿಗೆ ₹2.5 ಲಕ್ಷ ಕೋಟಿ ನಗದು ಲಭ್ಯವಾಗಲಿದೆ. ಈ ವರ್ಷದ ನವೆಂಬರ್ 29ಕ್ಕೆ ಕೊನೆಗೊಳ್ಳುವಂತೆ ನಾಲ್ಕು ಸಮಾನ ಹಂತಗಳಲ್ಲಿ ಸಿಆರ್‌ಆರ್‌ ಪ್ರಮಾಣವು ಶೇ 3ಕ್ಕೆ ಇಳಿಕೆ ಆಗಲಿದೆ.

ಅಂದರೆ ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐನಲ್ಲಿ ಇರಿಸಬೇಕಿರುವ ನಗದು ಪ್ರಮಾಣವು ಶೇ 3ಕ್ಕೆ ತಗ್ಗಲಿದೆ. ಹೀಗಾಗಿ ಈ ಬ್ಯಾಂಕ್‌ಗಳಿಗೆ ಸಾಲ ನೀಡಲು ಹೆಚ್ಚು ಹಣ ಸಿಗಲಿದೆ. ಸಿಆರ್‌ಆರ್‌ ಪ್ರಮಾಣವನ್ನು ಇದೇ ರೀತಿ ಶೇ 1ರಷ್ಟು ಪ್ರಮಾಣದಲ್ಲಿ 2020ರ ಮಾರ್ಚ್‌ 27ರಂದು ತಗ್ಗಿಸಲಾಗಿತ್ತು. ‘ಸಿಆರ್‌ಆರ್‌ ಇಳಿಕೆ ಮಾಡುವುದರಿಂದಾಗಿ ಅಂದಾಜು ₹2.5 ಲಕ್ಷ ಕೋಟಿ ಹಣವು ಈ ವರ್ಷದ ಡಿಸೆಂಬರ್‌ ವೇಳೆಗೆ ಬ್ಯಾಂಕಿಂಗ್‌ ವ್ಯವಸ್ಥೆಗೆ ಸಿಗಲಿದೆ’ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಶುಕ್ರವಾರ ತಿಳಿಸಿದ್ದಾರೆ. ಸಾಲ ನೀಡಲು ಹೆಚ್ಚಿನ ಹಣ ಲಭ್ಯವಾಗುವುದರಿಂದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.