ADVERTISEMENT

ಫ್ಲ್ಯಾಟ್‌ ಖರೀದಿ: ಬಾಕಿ ಹಣಕ್ಕೆ ಶೇ 12ಜಿಎಸ್‌ಟಿ ಅನ್ವಯ– ಸಿಬಿಐಸಿ ವಿವರಣೆ

​ಪ್ರಜಾವಾಣಿ ವಾರ್ತೆ
Published 15 ಮೇ 2019, 20:15 IST
Last Updated 15 ಮೇ 2019, 20:15 IST
   

ನವದೆಹಲಿ: ಗೃಹ ನಿರ್ಮಾಣ ಯೋಜನೆಯೊಂದು 2019ರ ಮಾರ್ಚ್‌ 31ರ ಮೊದಲು ನಿರ್ಮಾಣ ಕಾರ್ಯ ಪೂರ್ಣಗೊಳಿಸಿರುವ ಪ್ರಮಾಣ ಪತ್ರ ಪಡೆದುಕೊಂಡಿದ್ದರೆ, ಮನೆ ಖರೀದಿದಾರರು ಕಟ್ಟಡ ನಿರ್ಮಾಣಗಾರರಿಗೆ ಕೊಡಬೇಕಾದ ಬಾಕಿ ಹಣಕ್ಕೆ ಶೇ 12ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

ಕಟ್ಟಡ ನಿರ್ಮಾಣ ಕಾಯ್ದೆಯ ಎಲ್ಲ ಸುರಕ್ಷತಾ ನಿಯಮಗಳಿಗೆ ಅನುಗುಣವಾಗಿ ವಸತಿ ಯೋಜನೆಗಳನ್ನು ಪೂರ್ಣಗೊಳಿಸಿರುವ ಬಗ್ಗೆ ಪ್ರಮಾಣಪತ್ರ ನೀಡಲಾಗುತ್ತದೆ. ನಿರ್ಮಾಣ ಹಂತದಲ್ಲಿ ಇರುವ ವಸತಿ ಯೋಜನೆಗೆ, ಕಟ್ಟಡ ನಿರ್ಮಾಣಗಾರರು, ಪ್ರಮಾಣ ಪತ್ರವನ್ನು 2019ರ ಏಪ್ರಿಲ್‌ 1ರ ಮುಂಚೆ ಪಡೆದುಕೊಂಡಿದ್ದರೆ, ಫ್ಲ್ಯಾಟ್‌ ಖರೀದಿಗೆ ಖರೀದಿದಾರರು ಪಾವತಿಸಬೇಕಾದ ಬಾಕಿ ಹಣಕ್ಕೆ ಶೇ 12ರಷ್ಟು ಜಿಎಸ್‌ಟಿ ವಿಧಿಸಬಹುದು. ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಈ ಸಂಬಂಧದ ಗೊಂದಲಗಳಿಗೆ ವಿವರಣೆ ನೀಡಿದೆ.

ರಿಯಲ್‌ ಎಸ್ಟೇಟ್‌ ಸಂಸ್ಥೆಗಳು ಈ ವರ್ಷದ ಏಪ್ರಿಲ್‌ 1ರಿಂದ ಜಾರಿಗೆ ಬಂದಿರುವ ಹೊಸ ಜಿಎಸ್‌ಟಿ ದರಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆಯೂ ‘ಸಿಬಿಐಸಿ’ ವಾರದ ಹಿಂದೆ ವಿವರಣೆ ನೀಡಿತ್ತು.

ADVERTISEMENT

ಹುಟ್ಟುವಳಿ ತೆರಿಗೆ ಜಮೆಯ (ಐಟಿಸಿ) ಪ್ರಯೋಜನ ಪಡೆಯದೆ ಶೇ 5ರ ಜಿಎಸ್‌ಟಿ ಮತ್ತು ಕೈಗೆಟುಕುವ ದರಗಳ ವಸತಿ ಯೋಜನೆಗೆ ಶೇ 1ರಷ್ಟು ಜಿಎಸ್‌ಟಿ ವ್ಯವಸ್ಥೆಯು ಏಪ್ರಿಲ್‌ 1ರಿಂದ ಜಾರಿಗೆ ಬಂದಿದೆ.

ಸದ್ಯಕ್ಕೆ ನಿರ್ಮಾಣ ಹಂತದಲ್ಲಿ ಇರುವ ಯೋಜನೆಗಳಿಗೆ ‘ಐಟಿಸಿ’ ಪ್ರಯೋಜನ ಪಡೆಯುವ ಶೇ 12ರ ಬಡ್ಡಿ ದರ, ಕೈಗೆಟುಕುವ ವಸತಿ ಯೋಜನೆಗಳಿಗೆ ಶೇ 8 ಮತ್ತು ‘ಐಟಿಸಿ’ ಪ್ರಯೋಜನ ಪಡೆಯದ ಶೇ 5ರಷ್ಟು ಮತ್ತು ಕೈಗೆಟುಕುವ ಯೋಜನೆಗಳಿಗೆ ಶೇ 1ರಷ್ಟು ಜಿಎಸ್‌ಟಿ – ಇವೆರಡರಲ್ಲಿ ಒಂದು ತೆರಿಗೆ ಹಂತವನ್ನು ಆಯ್ಕೆ ಮಾಡಿಕೊಳ್ಳಲು ಕಟ್ಟಡ ನಿರ್ಮಾಣಗಾರರಿಗೆ ಅವಕಾಶ ನೀಡಲಾಗಿದೆ. ಇದೇ 20ರ ಒಳಗೆ ಈ ಬಗ್ಗೆ ತೀರ್ಮಾನಕ್ಕೆ ಬರಲು ಗಡುವು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.