ADVERTISEMENT

ಮನೆ ಮಾರಾಟ ಶೇ 5ರಷ್ಟು ಏರಿಕೆ

ಜನವರಿ–ಮಾರ್ಚ್‌ ಅವಧಿಯಲ್ಲಿನ 9 ನಗರಗಳ ಮಾಹಿತಿ

ಪಿಟಿಐ
Published 19 ಏಪ್ರಿಲ್ 2019, 17:45 IST
Last Updated 19 ಏಪ್ರಿಲ್ 2019, 17:45 IST
ಮನೆ
ಮನೆ   

ನವದೆಹಲಿ: ಬೆಂಗಳೂರೂ ಸೇರಿದಂತೆ ದೇಶದ ಒಂಬತ್ತು ಮಹಾನಗರಗಳಲ್ಲಿ ಈ ವರ್ಷದ ಜನವರಿಯಿಂದ ಮಾರ್ಚ್‌ ಅವಧಿವರೆಗೆ ಮನೆಗಳ ಮಾರಾಟವು ಶೇ 5ರಷ್ಟು ಏರಿಕೆಯಾಗಿದೆ.

ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಈ ಬಾರಿ 56,146 ಮನೆಗಳು ಮಾರಾಟಗೊಂಡಿವೆ ಎಂದು ರಿಯಲ್‌ ಎಸ್ಟೇಟ್‌ ದತ್ತಾಂಶ ವಿಶ್ಲೇಷಣಾ ಸಂಸ್ಥೆ ಪ್ರಾಪ್‌ಈಕ್ವಿಟಿಯ ಸಂಶೋಧಣಾ ವರದಿ ತಿಳಿಸಿದೆ.

ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಹೊಸ ಮನೆಗಳ ನಿರ್ಮಾಣವು ಶೇ 7ರಷ್ಟು ಕಡಿಮೆಯಾಗಿ 42,504ಕ್ಕೆ ಇಳಿದಿದೆ.

ADVERTISEMENT

ಬೆಂಗಳೂರು, ಗುರುಗ್ರಾಂ, ನೊಯಿಡಾ, ಮುಂಬೈ, ಕೋಲ್ಕತ್ತ, ಪುಣೆ, ಹೈದರಾಬಾದ್‌, ಠಾಣೆ ಮತ್ತು ಚೆನ್ನೈ ಮಹಾ ನಗರಗಳಲ್ಲಿ ಮನೆಗಳ ಮಾರಾಟವು ಏರಿಕೆಯಾಗಿದೆ.

ದೇಶಿ ರಿಯಲ್‌ ಎಸ್ಟೇಟ್‌ ಮಾರುಕಟ್ಟೆಯು ಸದ್ಯಕ್ಕೆ ಖರೀದಿದಾರರಿಂದ ಪ್ರಭಾವಿತವಾದ ಮಾರುಕಟ್ಟೆಯಾಗಿದೆ. ಗೃಹ ಪ್ರವೇಶಕ್ಕೆ ಸಿದ್ಧವಾದ ಮತ್ತು ಪೂರ್ಣಗೊಳ್ಳುವ ಹಂತಕ್ಕೆ ತಲುಪಿರುವ ವಸತಿ ಯೋಜನೆಗಳಲ್ಲಿ ಮನೆಗಳ ಖರೀದಿಗೆ ಒಲವು ಹೆಚ್ಚುತ್ತಿದೆ ಎಂದು ಸಂಸ್ಥೆಯು ತನ್ನ ವರದಿಯಲ್ಲಿ ತಿಳಿಸಿದೆ.

ಪೂರೈಕೆಯಲ್ಲಿನ ಕೊರತೆ ಮತ್ತು ಬೇಡಿಕೆ ಹೆಚ್ಚಳದ ಕಾರಣಕ್ಕೆ ಮಾರಾಟವಾಗದೆ ಉಳಿದ ಮನೆಗಳ ಸಂಖ್ಯೆಯು 2018ರ ಡಿಸೆಂಬರ್‌ಗೆ (6.16ಲಕ್ಷ) ಹೋಲಿಸಿದರೆ ಈಗ 5.91 ಲಕ್ಷಕ್ಕೆ ಇಳಿದಿದೆ.

ರಿಯಲ್‌ ಎಸ್ಟೇಟ್‌ ಉದ್ದಿಮೆಗೆ ನೆರವಾಗುವ ಹಲವಾರು ನಿರ್ಧಾರಗಳನ್ನು ಕೇಂದ್ರ ಸರ್ಕಾರವು ತನ್ನ ಮಧ್ಯಂತರ ಬಜೆಟ್‌ನಲ್ಲಿ ಪ್ರಕಟಿಸಿರುವುದು ಸಕಾರಾತ್ಮಕ ಪರಿಣಾಮ ಬೀರುತ್ತಿದೆ.

‘ಕೈಗೆಟುಕುವ ಯೋಜನೆಗಳಿಗೆ ಮತ್ತು ಮಧ್ಯಮ ಪ್ರಮಾಣದಲ್ಲಿ ವರಮಾನ ಹೊಂದಿದವರಿಂದ ಮನೆಗಳ ಖರೀದಿಗೆ ಬೇಡಿಕೆ ಹೆಚ್ಚುತ್ತಿದೆ. ಬ್ರ್ಯಾಂಡೆಡ್‌ ಮತ್ತು ದೊಡ್ಡ ಪ್ರಮಾಣದಲ್ಲಿ ವಸತಿ ಯೋಜನೆಗಳನ್ನು ಹಮ್ಮಿಕೊಂಡಿರುವವರು ಈ ವರ್ಷದಲ್ಲಿ ಉತ್ತಮ ವಹಿವಾಟು ನಡೆಸುವ ನಿರೀಕ್ಷೆ ಇದೆ’ ಎಂದು ಪ್ರಾಪ್‌ಈಕ್ವಿಟಿಯ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಮೀರ್‌ ಜಸುಜಾ ಹೇಳಿದ್ದಾರೆ.

ಒಂಬತ್ತು ನಗರಗಳ ಪೈಕಿ, ಪುಣೆ ನಗರದಲ್ಲಿ ಮನೆಗಳಿಗೆ ಬೇಡಿಕೆ ಗರಿಷ್ಠ ಮಟ್ಟದಲ್ಲಿ ಇದೆ.

ಜಿಎಸ್‌ಟಿ ಅಗ್ಗವಾಗಿರುವುದರಿಂದ ಮುಂಬರುವ ದಿನಗಳಲ್ಲಿ ಮನೆಗಳ ಬೇಡಿಕೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಎರಡನೆ ಮನೆ ಖರೀದಿಸಲು ಮಧ್ಯಂತರ ಬಜೆಟ್‌ನಲ್ಲಿ ತೆರಿಗೆ ಉತ್ತೇಜನಗಳನ್ನೂ ಪ್ರಕಟಿಸಲಾಗಿದೆ.

ಪ್ರಾಪ್‌ಈಕ್ವಿಟಿಯು ರಿಯಲ್‌ ಎಸ್ಟೇಟ್‌ ದತ್ತಾಂಶ ಮತ್ತು ವಿಶ್ಲೇಷಣೆ ಮಾಡುವ ಆನ್‌ಲೈನ್‌ ವೇದಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.