ADVERTISEMENT

ಕೋವಿಡ್‌ ಪೂರ್ವದ ಮಟ್ಟ ದಾಟಿದ ಮನೆಗಳ ಮಾರಾಟ

ಪಿಟಿಐ
Published 4 ಅಕ್ಟೋಬರ್ 2021, 14:04 IST
Last Updated 4 ಅಕ್ಟೋಬರ್ 2021, 14:04 IST
   

ನವದೆಹಲಿ: ಮನೆಗಳ ಮಾರಾಟವು ದೇಶದಲ್ಲಿ ಕೋವಿಡ್‌ ಪೂರ್ವದ ಮಟ್ಟವನ್ನು ಮೀರಿದೆ. ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ದೇಶದ ಎಂಟು ಪ್ರಮುಖ ನಗರಗಳಲ್ಲಿ ಮನೆಗಳ ಮಾರಾಟವು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 92ರಷ್ಟು ಏರಿಕೆ ಕಂಡಿದೆ.

ನೈಟ್‌ ಫ್ರ್ಯಾಂಕ್‌ ಇಂಡಿಯಾ ವರದಿಯಲ್ಲಿ ಈ ಅಂಶ ಉಲ್ಲೇಖವಾಗಿದೆ. ಹಿಂದಿನ ವರ್ಷದ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು 33,404 ಮನೆಗಳ ಮಾರಾಟ ಆಗಿತ್ತು. ಇದು ಈ ವರ್ಷದ ಇದೇ ಅವಧಿಯಲ್ಲಿ 64,010ಕ್ಕೆ ಏರಿಕೆ ಆಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

‘ಎಂಟು ನಗರಗಳಲ್ಲಿ 2019ರ ಇದೇ ಅವಧಿಯಲ್ಲಿ ಆದ ಮಾರಾಟಕ್ಕೆ ಹೋಲಿಸಿದರೆ, ಈ ವರ್ಷದ ಮಾರಾಟವು ಶೇ 104ರಷ್ಟು ಹೆಚ್ಚು’ ಎಂದು ವರದಿಯು ಹೇಳಿದೆ. ‘ಮನೆಗಳ ಬೆಲೆಯಲ್ಲಿ ಸ್ಥಿರತೆ ಇದ್ದುದು, ಗೃಹಸಾಲದ ಮೇಲಿನ ಬಡ್ಡಿ ದರವು ಕಡಿಮೆ ಮಟ್ಟದಲ್ಲಿ ಇದ್ದು ಹಾಗೂ ಸ್ವಂತ ಮನೆ ಹೊಂದಬೇಕು ಎಂಬ ವಿಚಾರದಲ್ಲಿ ಗ್ರಾಹಕರ ಧೋರಣೆ ಬದಲಾಗಿದ್ದು ಈ ಬೆಳವಣಿಗೆಗೆ ಕಾರಣ’ ಎಂದು ನೈಟ್ ಫ್ರ್ಯಾಂಕ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಿಶಿರ್ ಬೈಜಲ್ ತಿಳಿಸಿದರು.

ADVERTISEMENT

ಹಲವು ರಾಜ್ಯಗಳು ಮುದ್ರಾಂಕ ಶುಲ್ಕ ಕಡಿಮೆ ಮಾಡಿದ್ದು ಕೂಡ ಮಾರಾಟ ಹೆಚ್ಚಲು ಒಂದು ಕಾರಣ ಎಂದು ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ರಜನಿ ಸಿನ್ಹಾ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮನೆಗಳ ಮಾರಾಟವು ಈ ಅವಧಿಯಲ್ಲಿ ಎರಡು ಪಟ್ಟಿಗಿಂತ ಹೆಚ್ಚಾಗಿದ್ದು, 11,337ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.